ಇಂಫಾಲ್ (ಮಣಿಪುರ) :ಜನಾಂಗೀಯ ಸಂಘರ್ಷಕ್ಕೆ ತುತ್ತಾಗಿರುವ ಮಣಿಪುರಕ್ಕೆ 'ಇಂಡಿಯಾ' ಮೈತ್ರಿಕೂಟದ 21 ಸಂಸದರ 2 ದಿನಗಳ ಭೇಟಿಯ ಮೊದಲ ದಿನವಾದ ಶನಿವಾರ, ನಿರಾಶ್ರಿತರ ಶಿಬಿರಗಳಿಗೆ ತೆರಳಿ ಅವರ ಅಹವಾಲು ಆಲಿಸಿದರು. ಇದೇ ವೇಳೆ ಸಂತ್ರಸ್ತರು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಲು ಕೋರಿಕೊಂಡರು. ಇತ್ತ ಸಿಬಿಐ ತನಿಖೆಯನ್ನು ಪ್ರಶ್ನಿಸಿರುವ ಕಾಂಗ್ರೆಸ್, ಪ್ರಧಾನಿ, ಸಿಎಂಗಳಿಂದ ಆಗದ ಸಮಸ್ಯೆ ಪರಿಹಾರ, ತನಿಖಾ ಸಂಸ್ಥೆಯಿಂದ ಹೇಗೆ ಸಾಧ್ಯ? ಎಂದಿದೆ.
ಕಾಂಗ್ರೆಸ್ ನಾಯಕ ಅಧೀರ್ ರಂಜನ್, ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿರುವ ಸಂಸದ ಗೌರವ್ ಗೊಗೊಯ್, ಟಿಎಂಸಿ ಸಂಸದೆ ಸುಶ್ಮಿತಾ ದೇವ್, ಡಿಎಂಕೆ ಸಂಸದೆ ಕನಿಮೋಳಿ ಸೇರಿದಂತೆ 21 ಸಂಸದರು ಇಂಫಾಲ್, ಮೊಯಿರಂಗ್, ಚುರಾಚಂದ್ಪುರ ಸೇರಿದಂತೆ ಹಲವು ಪ್ರದೇಶಗಳ ಸಂತ್ರಸ್ತರ ಜೊತೆ ಮಾತುಕತೆ ನಡೆಸಿದರು.
ಈ ವೇಳೆ ತಾವು ಪಟ್ಟ ಕಷ್ಟದ ಬಗ್ಗೆ ಸಂತ್ರಸ್ತರು ಪ್ರತಿಪಕ್ಷಗಳ ನಿಯೋಗದ ಜೊತೆ ಹಂಚಿಕೊಂಡು, ಪರಿಸ್ಥಿತಿ ದಾರುಣವಾಗಿದೆ, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಿ ಎಂದು ಮನವಿ ಮಾಡಿದ್ದಾರೆ. ತಮ್ಮೊಂದಿಗೆ ನಾವಿದ್ದೇವೆ ಎಂದು ಅಭಯ ನೀಡಿರುವ ಇಂಡಿಯಾ ನಿಯೋಗ, ಅಧ್ಯಯನದ ಬಳಿಕ ವರದಿಯನ್ನು ರಾಜ್ಯಪಾಲರಿಗೆ ಸಲ್ಲಿಸಲಾಗುವುದು ಎಂದು ಹೇಳಿದೆ.
ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್, "ಇಂಡಿಯಾ ಮೈತ್ರಿಕೂಟವು ಮಣಿಪುರಕ್ಕೆ ನಿರಂತರವಾಗಿ ಭೇಟಿ ನೀಡುತ್ತಿರುವ ಏಕೈಕ ನಿಯೋಗ. ಇಲ್ಲಿನ ಸಮಸ್ಯೆ ಪರಿಹಾರಕ್ಕಾಗಿ ಪ್ರಧಾನಿ ಮೋದಿ ಅವರು ಸರ್ವಪಕ್ಷ ನಿಯೋಗವನ್ನು ಕರೆದರೆ ನಾವು ಅದರ ಭಾಗಿವಾಗಿರಲು ಸಿದ್ಧವಿದ್ದೇವೆ. ನಾವಿಲ್ಲಿ ರಾಜಕೀಯ ಮಾಡಲು ಬಂದಿಲ್ಲ. ರಾಜ್ಯದಲ್ಲಿ ಶಾಂತಿ ನೆಲೆಸಬೇಕು ಎಂಬುದು ನಮ್ಮ ಉದ್ದೇಶ" ಎಂದರು.
"ಹಲವು ಸಂತ್ರಸ್ತರ ಜೊತೆ ಮಾತುಕತೆ ನಡೆಸಿದ್ದೇವೆ. ನಿಯೋಗವು ಎಲ್ಲರೊಂದಿಗೆ ಚರ್ಚಿಸಿ ನಂತರ ವಿಸ್ತೃತ ವರದಿಯನ್ನು ರಾಜ್ಯಪಾಲರಿಗೆ ಸಲ್ಲಿಸುತ್ತೇವೆ. ಇಲ್ಲಿನ ಕರಾಳತೆಯ ಬಗ್ಗೆ ಸಂಸತ್ತಿನಲ್ಲಿ ಮಂಡಿಸುತ್ತೇವೆ" ಎಂದು ಹೇಳಿದರು.
'ಪ್ರಧಾನಿ ಮಾಡದ್ದು, ಸಿಬಿಐ ಮಾಡುತ್ತಾ?' :ಮಣಿಪುರ ಮಹಿಳೆಯರ ವಿಡಿಯೋ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ನೀಡಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಶೀದ್ ಅಲ್ವಿ, "ರಾಜ್ಯದಲ್ಲಿನ ಸಂಘರ್ಷವನ್ನು ನಿಲ್ಲಿಸಬೇಕಾಗಿದ್ದು ಸರ್ಕಾರದ ಕೆಲಸ. ಸಿಬಿಐನಿಂದ ಕೇಸ್ನ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬಹುದೇ ವಿನಹ, ಹಿಂಸಾಚಾರವನ್ನು ನಿಲ್ಲಿಸಲು ಸಾಧ್ಯವಿಲ್ಲ. ಪ್ರಧಾನಿ ಮೋದಿ ಅವರಿಗೆ ಮಣಿಪುರದ ಮೇಲೇಕೆ ಸಿಟ್ಟು, ಸಂಸತ್ತಿನಲ್ಲಿ ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ" ಎಂದು ಪ್ರಶ್ನಿಸಿದರು.
'ಈಶಾನ್ಯ ರಾಜ್ಯಗಳ ಬಗ್ಗೆ ಗಮನಿಸಿ'- ಮೇಘಾಲಯ ಸಿಎಂ :ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ಈಶಾನ್ಯ ರಾಜ್ಯಗಳಲ್ಲಿನ ಸಮಸ್ಯೆಗಳ ಬಗ್ಗೆ ಗಮನಹರಿಸಲು ಎಲ್ಲ ರಾಜಕೀಯ ಪಕ್ಷಗಳನ್ನು ಒತ್ತಾಯಿಸಿದ್ದಾರೆ. "ಇಲ್ಲಿನ ಸಮುದಾಯಗಳ ನಡುವಿನ ಸಂಘರ್ಷ, ಹಿಂಸಾಚಾರವನ್ನು ತಡೆದು ಶಾಂತಿ ಕಾಪಾಡಬೇಕಿದೆ. ಎಲ್ಲ ರಾಜಕೀಯ ಪಕ್ಷಗಳು ಇಲ್ಲಿಗೆ ಭೇಟಿ ನೀಡಲು ಸ್ವಾಗತಿಸುತ್ತೇನೆ. ಈಶಾನ್ಯ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕಿದೆ" ಎಂದು ಹೇಳಿದ್ದಾರೆ.
'ವಿಪಕ್ಷಗಳಿಂದ ಪಲಾಯನ':ಮಣಿಪುರಕ್ಕೆ ಭೇಟಿ ನೀಡಿರುವ ಇಂಡಿಯಾ ನಿಯೋಗವನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ನಾಯಕ ಸುಶೀಲ್ ಮೋದಿ, "ಕೇಂದ್ರ ಸರ್ಕಾರ ಹಿಂಸಾಚಾರದ ಬಗ್ಗೆ ಚರ್ಚೆಗೆ ಪ್ರಯತ್ನಿಸುತ್ತಿರುವಾಗ ಪ್ರತಿಪಕ್ಷಗಳು ಸಂಸತ್ತಿನಲ್ಲಿ ಪಲಾಯನ ನಡೆಸುತ್ತಿರುವುದೇಕೆ?. ಅಧಿವೇಶನವನ್ನು ಬೇಕಂತಲೇ ಹಾಳು ಮಾಡಲಾಗುತ್ತಿದೆ" ಎಂದು ಆರೋಪಿಸಿದರು.
"ವಿಪಕ್ಷಗಳ ನಿಯೋಗಕ್ಕೆ ಎಲ್ಲಿಗೆ ಬೇಕಾದರೂ ಭೇಟಿ ನೀಡುವ ಹಕ್ಕಿದೆ. ಆದರೆ, ಸಂಸತ್ತಿನ ಅಧಿವೇಶನ ನಡೆಯುತ್ತಿದೆ. ಸರ್ಕಾರ ಚರ್ಚೆಗೆ ಸಿದ್ಧವಾಗಿದೆ. ಇಷ್ಟಿದ್ದರೂ ಇಲ್ಲಿ ಚರ್ಚಿಸದೇ, ಮಣಿಪುರಕ್ಕೆ ತೆರಳಿ ಮಾಡುವುದೇನಿದೆ. ವಿಪಕ್ಷಗಳ ಪಲಾಯನವಾದದಿಂದಾಗಿ 7 ದಿನಗಳ ಕಲಾಪ ಹಾಳಾಗಿದೆ" ಎಂದು ಸುಶೀಲ್ ಮೋದಿ ಟೀಕಿಸಿದರು.
ಇದನ್ನೂ ಓದಿ:ಮಣಿಪುರ ಹಿಂಸಾಚಾರ.. ಸಂತ್ರಸ್ತ ಮಹಿಳೆಯರಿಗೆ ಧೈರ್ಯ ತುಂಬಿದ ರಾಜ್ಯಪಾಲೆ, 10 ಲಕ್ಷ ರೂ ಪರಿಹಾರ ವಿತರಣೆ!