ಇಂಫಾಲ್ (ಮಣಿಪುರ) : "ಮಗಳನ್ನು ನಗ್ನಗೊಳಿಸಿ ಮೆರವಣಿಗೆ ಮಾಡಿದ ದುಷ್ಕರ್ಮಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕು. ಇನ್ನು ಮುಂದೆ ನಮಗೆ ಮೈಥೇಯಿ ಸಮುದಾಯದವರೊಂದಿಗೆ ಬದುಕಲು ಸಾಧ್ಯವಿಲ್ಲ" ಎಂದು ಸಂತ್ರಸ್ತೆಯೊಬ್ಬರ ತಾಯಿ ವೇದನೆ ವ್ಯಕ್ತಪಡಿಸಿದರು. ಪ್ರತಿಪಕ್ಷಗಳ 'ಇಂಡಿಯಾ' ಒಕ್ಕೂಟದ ನಿಯೋಗವು ಶನಿವಾರ ಮಣಿಪುರಕ್ಕೆ ಭೇಟಿ ನೀಡಿ ಸಂತ್ರಸ್ತರ ಜೊತೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಅವರು ಮನವಿ ಮಾಡಿದ್ದಾರೆ.
"ಅಂದು ನಡೆದ ಹಿಂಸಾಚಾರದಲ್ಲಿ ನಾನು ನನ್ನ ಗಂಡ ಮತ್ತು ಮಗನನ್ನು ಕಳೆದುಕೊಂಡಿದ್ದೇನೆ. ನಮಗೆ ಸೂಕ್ತ ಪರಿಹಾರ ನೀಡಬೇಕು. ನಾನು ಇಲ್ಲಿನ ರಾಜ್ಯ ಸರ್ಕಾರವನ್ನು ನಂಬಲಾರೆ. ಆದರೆ ಕೇಂದ್ರ ಸರ್ಕಾರವನ್ನು ನಂಬುತ್ತೇನೆ" ಎಂದರು. ಇದೇ ವೇಳೆ, "ನಾನು ನನ್ನ ಮಗ ಹಾಗೂ ಗಂಡನ ಶವವನ್ನು ನೋಡಬೇಕು" ಎಂದು ನಿಯೋಗದ ಸದಸ್ಯರಾದ ಟಿಎಂಸಿ ಸಂಸದೆ ಸುಶ್ಮಿತಾ ದೇವ್ ಮತ್ತು ಡಿಎಂಕೆ ಸಂಸದೆ ಕನಿಮೋಳಿ ಅವರಲ್ಲಿ ಕಣ್ಣೀರಿನ ಬೇಡಿಕೆ ಇಟ್ಟರು.
ಸಂಸದೆ ಸುಶ್ಮಿತಾ ದೇವ್ ಪ್ರತಿಕ್ರಿಯಿಸಿ, "ದುಷ್ಕರ್ಮಿಗಳು ಇವರ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾರೆ. ಇವರ ಪತಿ ಮತ್ತು ಮಗನನ್ನು ಮಣಿಪುರ ಪೊಲೀಸರ ಸಮ್ಮುಖದಲ್ಲಿಯೇ ಕೊಂದು ಹಾಕಿದ್ದಾರೆ. ಇದುವರೆಗೂ ಓರ್ವ ಪೊಲೀಸ್ ಅಧಿಕಾರಿಯನ್ನೂ ಅಮಾನತುಗೊಳಿಸಿಲ್ಲ. ಸಂತ್ರಸ್ತೆಯು ತನ್ನ ಮೇಲೆ ಪೊಲೀಸರ ಮುಂದೆಯೇ ಅತ್ಯಾಚಾರ ನಡೆಯಿತು ಎಂದು ತಿಳಿಸಿದ್ದಾರೆ. ಆಕೆಯನ್ನು ರಕ್ಷಿಸಲು ಪೊಲೀಸರು ಕ್ರಮ ಕೈಗೊಂಡಿಲ್ಲ. ಇದೀಗ ಸಂತ್ರಸ್ತೆ ಪೊಲೀಸರಿಗೆ ಹೆದರುತ್ತಿದ್ದಾಳೆ. ಸಂತ್ರಸ್ತೆ ಪೊಲೀಸರನ್ನು ನಂಬದಿದ್ದರೆ ಅದು ಸಾಂವಿಧಾನಿಕ ಬಿಕ್ಕಟ್ಟಾಗುತ್ತದೆ" ಎಂದು ಹೇಳಿದರು.