ನವದೆಹಲಿ:ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ಪ್ರಧಾನಿ ತನ್ನ "ಸ್ವಯಂ ಪಟ್ಟಾಭಿಷೇಕದ" ಗೀಳು ಹೊಂದಿರುವಾಗ ಅಲ್ಲಿ ಭೀಕರ ದುರಂತವೊಂದು ಸಂಭವಿಸಿದೆ ಎಂದು ಕಿಡಿಕಾರಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ನಿಯೋಗ ಮಂಗಳವಾರ ಬೆಳಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ರಾಜ್ಯದ ಪರಿಸ್ಥಿತಿ ಕುರಿತು ವಿವರಿಸಲಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾಹಿತಿ ನೀಡಿದ್ದಾರೆ. "ಮಣಿಪುರ ಹೊತ್ತಿ ಉರಿಯಲು ಪ್ರಾರಂಭಿಸಿದ 25 ದಿನಗಳ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಹುನಿರೀಕ್ಷಿತ ಇಂಫಾಲ್ ಭೇಟಿಯ ಮುನ್ನಾದಿನದಂದು ಪರಿಸ್ಥಿತಿ ಕೆಟ್ಟದಾಗಿದೆ. ಸಂವಿಧಾನದ ಕಲಂ 355 ಅನ್ನು ವಿಧಿಸಲಾಗಿದ್ದರೂ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ" ಎಂದು ರಮೇಶ್ ಟ್ವಿಟರ್‌ನಲ್ಲಿ ಹೇಳಿದ್ದಾರೆ.
"ಪ್ರಧಾನಿಯವರು ತಮ್ಮ ಸ್ವಯಂ-ಪಟ್ಟಾಭಿಷೇಕದ (ನೂತನ ಸಂಸತ್ ಭವನ ಉದ್ಘಾಟನೆ) ಬಗ್ಗೆ ಗೀಳನ್ನು ಹೊಂದಿರುವಾಗ ಭೀಕರ ದುರಂತ ಘಟಿಸಿದೆ. ಅವರು ಯಾವುದೇ ಶಾಂತಿಯ ಮನವಿಗೆ ಕರೆ ನೀಡಿಲ್ಲ. ಸಮುದಾಯಗಳ ನಡುವೆ ನಂಬಿಕೆಯನ್ನು ಪುನರ್ನಿರ್ಮಿಸಲು ಪ್ರಯತ್ನಿಸಿಲ್ಲ" ಎಂದು ಅವರು ಆರೋಪಿಸಿದರು.
40 ಮಂದಿ ಉಗ್ರರಹತ್ಯೆ:ಇದಕ್ಕೂ ಮುನ್ನ ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಮಾತನಾಡಿ, ಜನಾಂಗೀಯ ಗಲಭೆಗಳಿಂದ ಆವೃತವಾಗಿರುವ ಈಶಾನ್ಯ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾರ್ಯಾಚರಣೆ ಆರಂಭಿಸಿದಾಗಿನಿಂದ ಸುಮಾರು 40 ಶಸ್ತ್ರಸಜ್ಜಿತ ಉಗ್ರಗಾಮಿಗಳನ್ನು ಭದ್ರತಾ ಪಡೆಗಳು ಹತ್ಯೆಗೈದಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳ ಪ್ರದೇಶಗಳಲ್ಲಿ ಹೊಸದಾಗಿ ಘರ್ಷಣೆಗಳು ಆರಂಭವಾಗಿವೆ. ಪ್ರತ್ಯೇಕವಾಗಿ ಭಾನುವಾರ(ನಿನ್ನೆ) ಮುಂಜಾನೆಯಿಂದ ಉಗ್ರರು ಮತ್ತು ಭದ್ರತಾ ಪಡೆಗಳ ನಡುವಿನ ಘರ್ಷಣೆಗಳಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 12 ಮಂದಿ ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
"ಉಗ್ರರು ನಾಗರಿಕರ ವಿರುದ್ಧ M-16 ಮತ್ತು AK-47 ರೈಫಲ್‌ಗಳು ಮತ್ತು ಸ್ನೈಪರ್ ಗನ್‌ಗಳನ್ನು ಬಳಸುತ್ತಿದ್ದಾರೆ. ಜನರ ಮನೆಗಳನ್ನು ಸುಟ್ಟುಹಾಕಲು ಹಳ್ಳಿಗಳಿಗೆ ನುಗ್ಗಿದ್ದರು. ನಾವು ಸೇನೆ ಮತ್ತು ಇತರ ಭದ್ರತಾ ಪಡೆಗಳ ಸಹಾಯದಿಂದ ಅವರ ವಿರುದ್ಧ ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳಲು ಪ್ರಾರಂಭಿಸಿದ್ದೇವೆ" ಎಂದು ತಿಳಿಸಿದರು.
ಪರಿಶಿಷ್ಟ ಪಂಗಡದ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೀಟೈ ಸಮುದಾಯದ ಬೇಡಿಕೆ ವಿರುದ್ಧ ಪ್ರತಿಭಟಿಸಲು ಮೇ 3 ರಂದು ಬೆಟ್ಟದ ಜಿಲ್ಲೆಗಳಲ್ಲಿ 'ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ' ಆಯೋಜಿಸಿದ ನಂತರ ಮಣಿಪುರದಲ್ಲಿ ಜನಾಂಗೀಯ ಘರ್ಷಣೆ ಭುಗಿಲೆದ್ದಿದೆ. ಹಿಂಸಾಚಾರದಲ್ಲಿ ಈವರೆಗೆ 75ಕ್ಕೂ ಹೆಚ್ಚು ಜೀವಗಳು ಬಲಿಯಾಗಿವೆ. ಮಣಿಪುರದ ಜನಸಂಖ್ಯೆಯ ಶೇ.53 ರಷ್ಟಿರುವ ಮೀಟೈಗಳು ಇಂಫಾಲ್ ಕಣಿವೆಯಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಬುಡಕಟ್ಟು ನಾಗಾಗಳು ಮತ್ತು ಕುಕಿಗಳು ಜನಸಂಖ್ಯೆಯ ಶೇ.40 ರಷ್ಟಿದ್ದಾರೆ ಮತ್ತು ಬೆಟ್ಟದ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.
ಇದನ್ನೂ ಓದಿ:ಮಣಿಪುರ ಹಿಂಸಾಚಾರ: ಸಶಸ್ತ್ರ ಬಂಡುಕೋರರ ಪತ್ತೆಗೆ ಭದ್ರತಾ ಪಡೆಗಳ ಕೂಂಬಿಂಗ್ ಶುರು