ನವದೆಹಲಿ: ಈಶಾನ್ಯ ರಾಜ್ಯ ಮಣಿಪುರದಲ್ಲಿ ನಡೆದ ಹಿಂಸಾಚಾರ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಕೇಂದ್ರ ಗೃಹ ಸಚಿವಾಲಯ ಮುಂದಾಗಿದೆ. ಜನಾಂಗೀಯ ಹಿಂಸಾಚಾರದ ತನಿಖೆಗಾಗಿ ಗುವಾಹತಿ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಅಜಯ್ ಲಂಬಾ ನೇತೃತ್ವದ ಮೂವರು ಸದಸ್ಯರ ತನಿಖಾ ಆಯೋಗವನ್ನು ನೇಮಕ ಮಾಡಲಾಗಿದೆ.
ಈ ಬಗ್ಗೆ ತನಿಖಾ ಆಯೋಗವು "ಮೊದಲ ಸಭೆಯ ದಿನದಿಂದ ಆರು ತಿಂಗಳ ಒಳಗಾಗಿ ತನ್ನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಲಾಗಿದೆ. ಈ ಆಯೋಗದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಅಜಯ್ ಲಂಬಾ ಅವರ ಜೊತೆಗೆ ಅಸ್ಸೋಂ-ಮೇಘಾಲಯ ಕೇಡರ್‌ನ 1982ರ ಬ್ಯಾಚ್‌ನ ನಿವೃತ್ತ ಐಎಎಸ್ ಅಧಿಕಾರಿ ಹಿಮಾಂಶು ಶೇಖರ್ ದಾಸ್ ಮತ್ತು ತೆಲಂಗಾಣ ಕೇಡರ್‌ನ 1986 ಬ್ಯಾಚ್‌ನ ನಿವೃತ್ತ ಐಪಿಎಸ್ ಅಧಿಕಾರಿ ಅಲೋಕ ಪ್ರಭಾಕರ್ ಅವರನ್ನು ನೇಮಕ ಮಾಡಲಾಗಿದೆ. ಮಣಿಪುರ ಸರ್ಕಾರವು ಮೇ 29ರಂದು ಈ ಹಿಂಸಾಚಾರದ ಬಗ್ಗೆ ತನಿಖೆ ನಡೆಸಲು ನ್ಯಾಯಾಂಗ ತನಿಖಾ ಆಯೋಗವನ್ನು ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಮಣಿಪುರ ಸರ್ಕಾರದ ಶಿಫಾರಸಿನ ಮೇರೆಗೆ, ಕೇಂದ್ರ ಸರ್ಕಾರವು ತನಿಖಾ ಆಯೋಗವನ್ನು ನೇಮಕ ಮಾಡಿದೆ.
ಈ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದು, ರಾಜ್ಯಕ್ಕೆ ಬೇಕಾದ ಆಹಾರ, ಔಷಧಗಳು ಮತ್ತು ಇಂಧನದಂತಹ ಮೂಲಭೂತ ಮತ್ತು ಅಗತ್ಯ ಸರಕುಗಳ ಸಾಗಾಟಕ್ಕೆ ರಾಷ್ಟ್ರೀಯ ಹೆದ್ದಾರಿ- 2ರಲ್ಲಿನ ತಡೆಯನ್ನು ಹಿಂತೆಗೆದುಕೊಳ್ಳುವಂತೆ ಮಣಿಪುರದ ಜನರಲ್ಲಿ ಮನವಿ ಶಾ ಮಾಡಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಸಾರ್ವಜನಿಕರಲ್ಲಿ, ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಕೇಳಿಕೊಂಡಿದ್ದಾರೆ.