ಇಂಫಾಲ (ಮಣಿಪುರ):ಜನಾಂಗೀಯ ಸಂಘರ್ಷವನ್ನು ತಡೆಯಲು ನವೆಂಬರ್ 8ರ ವರೆಗೆ ಮಣಿಪುರದಲ್ಲಿ ಅಂತರ್ಜಾಲ ಸೇವೆಯನ್ನು ಸರ್ಕಾರ ನಿರ್ಬಂಧಿಸಿದೆ. ಕಲಹ ಉಂಟಾಗದ ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಆರಂಭಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಸಿದ್ಧಾರ್ಥ್ ಮೃದುಲ್ ಮತ್ತು ನ್ಯಾಯಮೂರ್ತಿ ಗೋಲ್ಮೆಯ್ ಗೈಫುಲ್‌ಶಿಲ್ಲು ಕಬುಯಿ ಅವರನ್ನೊಳಗೊಂಡ ವಿಭಾಗೀಯ ಪೀಠವು, ಹಿಂಸಾಚಾರದಿಂದ ಬಾಧಿತವಲ್ಲದ ಪ್ರದೇಶಗಳಲ್ಲಿ ಸೇವೆಗಳಿಗೆ ಅನುಮತಿ ನೀಡಬೇಕು. ಜೊತೆಗೆ ಮೊಬೈಲ್ ಇಂಟರ್ನೆಟ್ ಡೇಟಾ ಸೇವೆಗಳನ್ನು ಅಮಾನತಿನಲ್ಲಿಟ್ಟ ಆದೇಶಗಳ ಪ್ರತಿಗಳನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ನವೆಂಬರ್ 9 ಕ್ಕೆ ಮುಂದೂಡಿದೆ.
ಸೆಪ್ಟೆಂಬರ್‌ನಲ್ಲಿ ಕೆಲವು ದಿನಗಳನ್ನು ಹೊರತುಪಡಿಸಿ, ಜನಾಂಗೀಯ ಘರ್ಷಣೆ ಪ್ರಾರಂಭವಾದ ಮೇ 3 ರಿಂದ ಮಣಿಪುರದಲ್ಲಿ ಮೊಬೈಲ್ ಇಂಟರ್ನೆಟ್ ಅನ್ನು ಸರ್ಕಾರ ನಿಷೇಧಿಸಿದೆ. ಕಳೆದ ವಾರ ಗುಂಪೊಂದು ಮಣಿಪುರ ರೈಫಲ್ಸ್ ಶಿಬಿರದ ಮೇಲೆ ದಾಳಿ ಮಾಡಿ ಅಲ್ಲಿನ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದೆ. ಇದು ಮತ್ತೆ ಉದ್ವಿಗ್ನತೆಗೆ ಕಾರಣವಾಗಿದೆ. ದಾಳಿಯ ವೇಳೆ ಭದ್ರತಾ ಸಿಬ್ಬಂದಿ ಮತ್ತು ಗುಂಪಿನ ನಡುವೆ ಗುಂಡಿನ ಚಕಮಕಿ ನಡೆದಿದೆ.
ಇಂಟರ್ನೆಟ್ ನಿಷೇಧ ವಿಸ್ತರಣೆ:ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ, ಸಾರ್ವಜನಿಕರ ಭಾವೋದ್ರೇಕಗಳನ್ನು ಪ್ರಚೋದಿಸುವ ಚಿತ್ರಗಳು, ದ್ವೇಷ ಭಾಷಣಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿವೆ. ಇದರಿಂದ ಮತ್ತೆ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತದೆ ಎಂಬ ಕಾರಣಕ್ಕಾಗಿ ಅಲ್ಲಿನ ಸರ್ಕಾರ ಇಂಟರ್ನೆಟ್ ಸೇವೆ ಮೇಲಿನ ನಿರ್ಬಂಧವನ್ನು ನವೆಂಬರ್ 8ರ ವರೆಗೆ ವಿಸ್ತರಿಸಿದೆ. ಶಾಂತವಾಗಿರುವ ಪ್ರದೇಶಗಳಲ್ಲೂ ಇದು ದ್ವೇಷ ಹರಡುವ ಸಾಧ್ಯತೆ ಇದೆ ಎಂಬುದು ಸರ್ಕಾರದ ಆತಂಕವಾಗಿದೆ.