ತೇಜ್‌ಪುರ (ಅಸ್ಸೋಂ ): ಮಣಿಪುರದಲ್ಲಿ ಉದ್ವಿಗ್ನ ಪರಿಸ್ಥಿತಿಯ ನಡುವೆ ನಾಗಾಲ್ಯಾಂಡ್‌ನ ಅನೇಕ ಜನರು ಮಣಿಪುರದಲ್ಲಿ ಸಿಲುಕಿಕೊಂಡಿದ್ದಾರೆ. ಈ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು, ಅಸ್ಸೋಂ ರೈಫಲ್ಸ್ ಸ್ಪಿಯರ್ ಕಾರ್ಪ್ಸ್ ಅಡಿ ಎರಡು ಹಂತಗಳಲ್ಲಿ 'ಆಪರೇಷನ್ ಕೊಹಿಮಾ ಕಾಲಿಂಗ್' ಅನ್ನು ಕೈಗೊಂಡಿತು. 1ನೇ ಹಂತದಲ್ಲಿ 676 ವ್ಯಕ್ತಿಗಳು ಮತ್ತು 2ನೇ ಹಂತದಲ್ಲಿ 553 ವ್ಯಕ್ತಿಗಳನ್ನು ಸ್ಥಳಾಂತರಿಸಲಾಗಿದೆ.
2ನೇ ಹಂತದಲ್ಲಿ ಯೊರಿಪೋಕ್‌ನ 47 ಕೊನ್ಯಾಕ್ ಹುಡುಗಿಯರು ಸೇರಿದ್ದಾರೆ. ಈ ಬಾಲಕಿಯರನ್ನು ಹೊರತೆಗೆಯಲು ರಕ್ಷಣಾ ತಂಡ ತೌಬಲ್ ಜಿಲ್ಲೆಯ ಒಳಭಾಗಗಳಿಗೆ ತೆರಳಿದೆ. ಅವರೆಲ್ಲರೂ ವೆನೀರ್ ಕಾರ್ಖಾನೆಯಲ್ಲಿ ಗಂಟೆಯ ವೇತನದ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು.
ಮ್ಯಾನ್ಮಾರ್ನಿಂದ ಅಕ್ರಮವಾಗಿ ವಲಸೆ ಬರುತ್ತಿರುವರಿಂದಲೇ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಎಂದು ಪೀಪಲ್ಸ್ ಅಲೆಯನ್ಸ್ ಫಾರ್ ಪೀಸ್ ಅಂಡ್ ಪ್ರೊಗ್ರೆಸ್ ಮಣಿಪುರ ಮತ್ತು ದೆಹಲಿ ಮಣಿಪುರ ಆರೋಪಿಸಿದೆ. ಮ್ಯಾನ್ಮಾರ್ದಿಂದ ಅಕ್ರಮವಾಗಿ ಬಂದ ಕುಕಿ ಸಮುದಾಯದ ಜನರು ಕೇಂದ್ರ ಸರ್ಕಾರದಲ್ಲಿ ಅಕ್ರಮವಾಗಿ ಉದ್ಯೋಗ ಪಡೆದಿದ್ದಾರೆ ಎಂದು ದೆಹಲಿ ಮಣಿಪುರಿ ಸೊಸೈಟಿ ಮತ್ತು ಜವಹಾರ್ ಲಾಲ್ ನೆಹರು ಯುನಿವರ್ಸಿಟಿಯ ಪ್ರೊಫೆಸರ್ ಭಗತ್ ಒನಿಮ್ ದೂರಿದ್ದಾರೆ.
ಬುಡಕಟ್ಟು ಸ್ಥಾನಮಾನಕ್ಕೆ ಒತ್ತಾಯ :ಮಣಿಪುರ ಚುನಾವಣಾ ರಾಜಕೀಯದಲ್ಲಿ ಕುಕಿ ಸಮುದಾಯ ಪ್ರಭಾವಶಾಲಿಯಾಗಿದೆ ಎಂದಿರುವ ಒನಿಮ್, ಕುಕಿಗಳು ಬೇರೆ ದೇಶದಿಂದ ಇಲ್ಲಿಗೆ ವಲಸೆ ಬಂದಿದ್ದು, ತಮ್ಮನ್ನು ತಾವು ಇಲ್ಲಿನ ಮತದಾರರು ಎಂದು ಗುರುತಿಸಿಕೊಂಡಿದ್ದಾರೆ. ಅಲ್ಲದೇ ಇದೀಗ ಅವರು ಇಲ್ಲಿ ಇತರ ಜನಾಂಗದವರ ಮೇಲೆ ತಮ್ಮ ಪ್ರಾಬಲ್ಯವನ್ನು ಸಾಧಿಸಲು ಮುಂದಾಗಿದ್ದಾರೆ. ಇದೇ ಕಾರಣಕ್ಕೆ ಈ ನಿರ್ದಿಷ್ಟ ಸಮುದಾಯದ ಮಂದಿಯನ್ನು ಗುರಿ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.