ನವದೆಹಲಿ:ಮಣಿಪುರದ ಮಹಿಳೆಯರ ಬೆತ್ತಲೆ ಮೆರವಣಿಗೆಯ ವಿಡಿಯೋಗೆ ದೇಶಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಗಲಭೆ ಪೀಡಿತ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಭದ್ರತಾ ಪಡೆಗಳು ಮತ್ತು ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಮೇ 3 ರಿಂದ ಪ್ರಾರಂಭವಾಗಿರುವ ಹಿಂಸಾತ್ಮಕ ಘರ್ಷಣೆಗಳಲ್ಲಿ ಈವರೆಗೂ 6 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಸಾಮಾಜಿಕ ಮಾಧ್ಯಮಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಇದರಲ್ಲಿ ಬೆಂಕಿ ಹಚ್ಚುವಿಕೆ ಮತ್ತು ಸರ್ಕಾರಿ ಆಸ್ತಿ ಹಾನಿಗೆ ಸಂಬಂಧಿಸಿದೆ ಹಲವು ಪ್ರಕರಣಗಳನ್ನು ಬೇಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನಾಂಗೀಯ ಸಂಘರ್ಷ ಆರಂಭವಾದ ಮರುದಿನವೇ ಅಂದರೆ ಮೇ 4 ರಂದು ಇಬ್ಬರು ಮಹಿಳೆಯರನ್ನು ಎಳೆದೊಯ್ದು ಬೆತ್ತಲೆಯಾಗಿ ಮೆರವಣಿಗೆ ಮಾಡಿಸಿದ ವಿಡಿಯೋ ಇದೀಗ ವೈರಲ್ ಆಗಿದೆ. ಇದು ರಾಜ್ಯ, ದೇಶದ ಮರ್ಯಾದೆಯನ್ನೇ ಅಣಕಿಸುವಂತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಇದು ಸುದ್ದಿಯಾಗಿದೆ. ಹೀಗಾಗಿ ಭದ್ರತಾ ಪಡೆಗಳು, ಪೊಲೀಸರು ಕಠಿಣ ಕ್ರಮಗಳಿಗೆ ಮುಂದಾಗಿದ್ದಾರೆ.
ರಾಜ್ಯದಲ್ಲಿ ಜನಾಂಗೀಯ ಸಂಘರ್ಷ ತೀವ್ರ ಸ್ವರೂಪ ಪಡೆಯದಂತೆ ನಾವು ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರೂ, ಜನರು ಸಂಘರ್ಷಕ್ಕೆ ಇಳಿಯುತ್ತಿದ್ದಾರೆ. ಮನೆ, ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಚ್ಚುವ ಹಲವು ದುಷ್ಕೃತ್ಯಗಳನ್ನು ಮೊದಲೇ ಗುರುತಿಸಿ ಹತ್ತಿಕ್ಕಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಮಹಿಳೆಯರ ಬೆತ್ತಲೆ ವಿಡಿಯೋ ಬಳಿಕ, ವ್ಯಕ್ತಿಯ ತಲೆ ತುಂಡರಿಸಿ ಬಿದುರಿನ ಕಡ್ಡಿಗೆ ನೇತು ಹಾಕಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದರ ಸತ್ಯಾತ್ಯತೆಯನ್ನು ಪರಿಶೀಲಿಸಲಾಗುತ್ತಿದೆ. ಇಂತಹ ವಿಡಿಯೋಗಳು ಸಮಾಜದಲ್ಲಿ ಕುಕೃತ್ಯಕ್ಕೆ ಕಾರಣವಾಗುತ್ತಿವೆ. ಹೀಗಾಗಿ ತಪ್ಪು ಮಾಹಿತಿಯನ್ನು ಹರಡುವ ಮಾಧ್ಯಮಗಳನ್ನು ನಿಯಂತ್ರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಠಾಣೆಗಳಲ್ಲಿ ಸಂಪನ್ಮೂಲ ಕೊರತೆ:ರಾಜ್ಯದಲ್ಲಿ ಕಳೆದ 80 ದಿನಗಳಿಂದ ಇಷ್ಟು ಪ್ರಮಾಣದಲ್ಲಿ ಸಂಘರ್ಷ ನಡೆಯುತ್ತಿದೆ. ಇದನ್ನು ತಡೆಯಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಆದರೆ, ಪೊಲೀಸರು, ಭದ್ರತಾ ಸಿಬ್ಬಂದಿ ಹಿರಿಯ ಅಧಿಕಾರಿಗಳ ಸಲಹೆಯಿಲ್ಲದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಠಾಣೆಗಳಲ್ಲಿ ಸಂಪನ್ಮೂಲ ಕೊರತೆಗಳಿವೆ. ಹೀಗಾಗಿ ಕೊಲೆ ಮತ್ತು ಹಲ್ಲೆಯಂತಹ ಗಂಭೀರ ಅಪರಾಧಗಳ ತನಿಖೆಗೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ರಾಜ್ಯ ಪೊಲೀಸರಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರ 135 ಸೇನಾ ಪಡೆಗಳನ್ನು ಕಳುಹಿಸಿದೆ. ಕೆಲ ಕಹಿ ಘಟನೆಗಳು ನಡೆಯುತ್ತಿದ್ದರೂ ಪರಿಸ್ಥಿತಿ ಸುಧಾರಿಸುತ್ತಿದೆ. ರಾಜ್ಯದ 16 ಜಿಲ್ಲೆಗಳ ಪೈಕಿ ಅರ್ಧದಷ್ಟು ಜಿಲ್ಲೆಗಳು ಇನ್ನೂ ತೊಂದರೆ ಪೀಡಿತವೆಂದು ಪರಿಗಣಿಸಲಾಗಿದೆ ಎಂದು ತಿಳಿಸಿದ್ದಾರೆ.
ಕುಕಿ ಮತ್ತು ಮೇತೇಯಿ ಬುಡಕಟ್ಟು ಜನಾಂಗಗಳ ನಡುವಿನ ಘರ್ಷಣೆಯಲ್ಲಿ ಇದುವರೆಗೂ 130 ಕ್ಕೂ ಅಧಿಕ ಸಾವುಗಳು ಸಂಭವಿಸಿವೆ. 40,000 ಕ್ಕೂ ಹೆಚ್ಚು ಮಂದಿ ಸ್ಥಳಾಂತರಗೊಂಡಿದ್ದಾರೆ. ಈ ಎಲ್ಲಾ ಘಟನೆಗಳ ನಡುವೆ ರಾಜ್ಯದಲ್ಲಿ ಶಾಂತಿ ಸ್ಥಾಪನೆಗಾಗಿ ಪೊಲೀಸ್ ಮತ್ತು ಸೇನಾ ಸಿಬ್ಬಂದಿ ಹೆಣಗಾಡುತ್ತಿದ್ದಾರೆ.
ಇದನ್ನೂ ಓದಿ:ಮಣಿಪುರ ಬೆತ್ತಲೆ ಪ್ರಕರಣ: ಕಾರ್ಗಿಲ್ನಲ್ಲಿ ದೇಶಕ್ಕಾಗಿ ಹೋರಾಡಿದೆ, ಆದರೆ ನನ್ನ ಪತ್ನಿಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ: ಮಾಜಿ ಸೈನಿಕ