ನವದೆಹಲಿ:ಈಶಾನ್ಯ ರಾಜ್ಯ ಮಣಿಪುರದಲ್ಲಿ ಸುಮಾರು ಎರಡು ತಿಂಗಳಿಂದ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಮಧ್ಯೆ ಶುಕ್ರವಾರ ಹೈಡ್ರಾಮ ನಡೆಯಿತು. ಇಂದು ಮುಖ್ಯಮಂತ್ರಿ ಬಿರೇನ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು. ಇದರ ನಡುವೆ ಸಿಂಗ್ ಅವರ ಮಹಿಳಾ ಬೆಂಬಲಿಗರು ರಾಜೀನಾಮೆ ಪತ್ರವನ್ನು ಹರಿದು ಹಾಕಿದ್ದಾರೆ. ಇದರ ಬೆನ್ನಲ್ಲೇ ತಾವು ರಾಜೀನಾಮೆ ನೀಡುವುದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.
ಇದನ್ನೂ ಓದಿ:Manipur Violence: ಮಣಿಪುರದಲ್ಲಿ ಪರಿಸ್ಥಿತಿ ನಿಯಂತ್ರಣ.. ಜೂ.13ರಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ: ಅಮಿತ್ ಶಾ ಭೇಟಿಯಾದ ಸಿಎಂ ಬಿರೇನ್ ಸಿಂಗ್
ಪರಿಶಿಷ್ಟ ಪಂಗಡದ ಮೀಸಲಾತಿ ವಿಚಾರವಾಗಿ ಮೈಥೇಯಿ ಮತ್ತು ಬುಡಕಟ್ಟು ಕುಕಿ ಸಮುದಾಯಗಳ ನಡುವೆ ಹಿಂಸಾಚಾರ ಭುಗಿಲೆದ್ದಿದೆ. ಮೇ 3ರಂದು ಆರಂಭವಾದ ಎರಡು ಸಮುದಾಯ ಸಂಘರ್ಷದಲ್ಲಿ ಸುಮಾರು 120 ಜನರು ಸಾವನ್ನಪ್ಪಿದ್ದಾರೆ. ಮೂರು ಸಾವಿರಕ್ಕೂ ಅಧಿಕ ಜನರು ಗಾಯಗೊಂಡಿದ್ದು, ಸಾವಿರಾರು ಜನರು ಸ್ಥಳಾಂತರಗೊಂಡು ಬೇರೆಡೆ ಆಶ್ರಯ ಪಡೆದಿದ್ದಾರೆ. ಮತ್ತೊಂದೆಡೆ, ಕಾನೂನು ಮತ್ತು ಸುವ್ಯವಸ್ಥೆ ವಿಷಯವಾಗಿ ಸಿಎಂ ಬಿರೇನ್ ಸಿಂಗ್ ವಿರುದ್ಧ ಪ್ರತಿಪಕ್ಷಗಳು ವಾಗ್ದಾಳಿ ನಡೆಸಿ, ರಾಜೀನಾಮೆಗೂ ಆಗ್ರಹಿಸಿವೆ.
ಇದರ ನಡುವೆ ಇಂದು ರಾಜಧಾನಿ ಇಂಫಾಲ ಭಾರಿ ಹೈಡ್ರಾಮಕ್ಕೆ ಸಾಕ್ಷಿಯಾಯಿತು. ಮಣಿಪುರದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಗದ ಸಿಎಂ ಬಿರೇನ್ ಸಿಂಗ್, ಇಂದು ರಾಜ್ಯಪಾಲ ಅನುಸೂಯಾ ಉಯಿಕೆ ಅವರಿಗೆ ರಾಜೀನಾಮೆ ಸಲ್ಲಿಸುತ್ತಾರೆ. ಎಂದು ಸುದ್ದಿ ಬಲವಾಗಿ ಹರಿದಾಡಿತು. ಇದಕ್ಕೆ ಪುಷ್ಟಿ ಎಂಬಂತೆ ಅವರು ಮಧ್ಯಾಹ್ನ 2 ಗಂಟೆಗೆ ರಾಜ್ಯಪಾಲರನ್ನು ಭೇಟಿಯಾಗಲು ನಿರ್ಧರಿಸಿದ್ದರು. ಆದರೆ, ಈ ವಿಷಯ ತಿಳಿಯುತ್ತಿದ್ದಂತೆ ಅವರ ಬೆಂಬಲಿಗರು ಹಾಗೂ ಮಹಿಳೆಯರ ದಂಡು ಮುಖ್ಯಮಂತ್ರಿ ನಿವಾಸದೆದುರು ಸೇರಿದರು.
ಸಿಎಂ ರಾಜೀನಾಮೆ ನೀಡುವುದನ್ನು ವಿರೋಧಿಸಿದ ನಿವಾಸ ಮುಂದೆ ಭಾರಿ ಸಂಖ್ಯೆಯಲ್ಲಿ ಜಮಾವಣೆಗೊಂಡು ಮಾನವ ಸರಪಳಿ ನಿರ್ಮಿಸಿದರು. ಇದರಿಂದ ರಾಜ್ಯಪಾಲರನ್ನು ಭೇಟಿ ಮಾಡುವ ಸಮಯವನ್ನು ಬಿರೇನ್ ಸಿಂಗ್ ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು. ಇದರ ಮಧ್ಯೆ 20 ಶಾಸಕರ ಜೊತೆಗೆ ಸಿಎಂ ರಾಜಭವನದ ಕಡೆಗೆ ತೆರಳಲು ಸಜ್ಜಾಗಿದ್ದರು. ಆಗ ಬೆಂಬಲಿಗರು ಸಿಎಂ ಅವರನ್ನು ತಡೆದು ನಿವಾಸದೊಳಗೆ ಹೋಗುವಂತೆ ಒತ್ತಾಯಿಸಿದರು. ಇದೇ ವೇಳೆ ಇಬ್ಬರು ಶಾಸಕರು ಬಿರೇನ್ ಸಿಂಗ್ ಅವರ ರಾಜೀನಾಮೆ ಪತ್ರ ಸಮೇತವಾಗಿ ಜನರ ಮುಂದೆ ಬಂದರು. ಈ ವೇಳೆ, ಶಾಸಕರೊಬ್ಬರ ಕೈಯಲ್ಲಿದ್ದ ಸಿಎಂ ರಾಜೀನಾಮೆ ಪತ್ರವನ್ನು ಮಹಿಳಾ ಬೆಂಬಲಿಗರು ಎಳೆದುಕೊಂಡು ಹರಿದು ಹಾಕಿದರು. ಇದರ ದೃಶ್ಯಗಳು ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾಗಿವೆ.
ರಾಜೀನಾಮೆ ನೀಡಲ್ಲ- ಬಿರೇನ್ ಸಿಂಗ್:ತಮ್ಮ ನಿವಾಸ ಮುಂದೆ ನಡೆದ ಇಡೀ ಬೆಳವಣಿಗೆಗಳ ಬಳಿಕ ಸಿಎಂ ಬಿರೇನ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಈ ನಿರ್ಣಾಯಕ ಘಟ್ಟದಲ್ಲಿ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ. ಅಲ್ಲದೇ, ಸರ್ಕಾರದ ವಕ್ತಾರ ಸಪನ್ ರಂಜನ್ ಸಿಂಗ್ ಮಾತನಾಡಿ, ಮುಖ್ಯಮಂತ್ರಿ ರಾಜೀನಾಮೆ ನೀಡದಂತೆ ಒತ್ತಾಯಿಸಲು ಹಲವಾರು ರಾಜ್ಯದ ಸಚಿವರು ಮತ್ತು ಶಾಸಕರು ಸಹ ಪ್ರತಿಭಟನಾಕಾರರೊಂದಿಗೆ ಸೇರಿಕೊಂಡರು. ಜನರ ಧ್ವನಿ ಅತ್ಯಂತ ಮುಖ್ಯ. ಜನರ ಭಾವನೆಗಳನ್ನು ಸಿಎಂ ಪರಿಗಣನೆಗೆ ತೆಗೆದುಕೊಳ್ಳಬೇಕೆಂದು ಹೇಳಿದ್ದಾರೆ.
ಇದನ್ನೂ ಓದಿ:Manipur violence: ಮಣಿಪುರದಲ್ಲಿ ರಾಹುಲ್ ಗಾಂಧಿ ಪ್ರಯಾಣಕ್ಕೆ ತಡೆ; ಸುರಕ್ಷತೆಗಾಗಿ ಕ್ರಮವೆಂದ ಪೊಲೀಸರು