ಇಂಫಾಲ (ಮಣಿಪುರ) : ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿರುವ ಈಶಾನ್ಯ ರಾಜ್ಯ ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆ ಕೊಂಚ ಸುಧಾರಿಸುತ್ತಿದೆ. ಆದರೂ, ರಾಜ್ಯದ ಅಲ್ಲಲ್ಲಿ ಘರ್ಷಣೆಗಳು ಮುಂದುವರಿದಿವೆ. ನಾಳೆ (ಮಂಗಳವಾರ) ತುರ್ತು ವಿಧಾನಸಭೆ ಅಧಿವೇಶನ ಕರೆಯಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ವಿವಿಧ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಮತ್ತು ಭದ್ರತಾ ಪಡೆಗಳು ಕಳೆದ 24 ಗಂಟೆಗಳ ಅವಧಿಯಲ್ಲಿ 30 ಶಸ್ತ್ರಾಸ್ತ್ರಗಳು, 16 ಭಾರಿ ಸ್ಫೋಟಕಗಳನ್ನು ಜಪ್ತಿ ಮಾಡಿದ್ದು, 3,662 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಗುಡ್ಡಗಾಡು ರಾಜ್ಯದ ಹಲವಾರು ಪ್ರದೇಶಗಳಲ್ಲಿ ಸಣ್ಣಪುಟ್ಟ ಹಿಂಸಾಚಾರಗಳು ಮುಂದುವರಿದಿವೆ. ಇಂಫಾಲ ಪೂರ್ವ ಜಿಲ್ಲೆಯಲ್ಲಿ ಭಾನುವಾರ ಐದು ಮನೆಗಳಿಗೆ ಅಪರಿಚಿತ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಭದ್ರತಾ ಸಿಬ್ಬಂದಿಯ ಮೂರು ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದ್ದಾರೆ. ನಂತರ ಮಣಿಪುರ ಪೊಲೀಸರು ಕೇಂದ್ರ ಭದ್ರತಾ ಪಡೆಗಳೊಂದಿಗೆ ಜಂಟಿ ಕಾರ್ಯಾಚರಣೆ ಆರಂಭಿಸಿದ್ದರು. ರಾಜ್ಯದಲ್ಲಿ ಸಂಘರ್ಷದ ನಡುವೆಯೂ ರಾಜ್ಯಪಾಲರು ತುರ್ತು ವಿಧಾನಸಭೆ ಅಧಿವೇಶನವನ್ನು ಕರೆದಿದ್ದಾರೆ. ಶಾಂತ ಅಧಿವೇಶನಕ್ಕಾಗಿ ಪೊಲೀಸರು ವಿವಿಧ ಜಿಲ್ಲೆಗಳಲ್ಲಿ ದಾಳಿ ನಡೆಸಿ, ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಜನರನ್ನು ವಶಕ್ಕೆ ಪಡೆಯುತ್ತಿದ್ದಾರೆ.
127 ಚೆಕ್ಪೋಸ್ಟ್ ಸ್ಥಾಪನೆ:ಕಳೆದ 24 ಗಂಟೆಗಳಲ್ಲಿ ಇಂಫಾಲ ಪೂರ್ವ, ಇಂಫಾಲ ಪಶ್ಚಿಮ, ಕಕ್ಚಿಂಗ್, ತೌಬಲ್, ಕಾಂಗ್‌ಪೋಕ್ಪಿ ಮತ್ತು ಬಿಷ್ಣುಪುರ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಿ 16 ಶಸ್ತ್ರಾಸ್ತ್ರಗಳು, 70 ಬುಲೆಟ್‌ಗಳನ್ನು ಜಪ್ತಿ ಮಾಡಲಾಗಿದೆ. ವಿವಿಧ ಜಿಲ್ಲೆಗಳಲ್ಲಿ ಬೆಟ್ಟಗಳು ಮತ್ತು ಕಣಿವೆಗಳಲ್ಲಿ ಒಟ್ಟು 127 ಸ್ಥಳಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಕಾನೂನು ಉಲ್ಲಂಘನೆ ತಡೆಗೆ 2,257 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.