ಅಗರ್ತಲಾ (ತ್ರಿಪುರಾ):ತ್ರಿಪುರಾ ವಿಧಾನಸಭೆಗೆ ಈಚೆಗಷ್ಟೇ ನಡೆದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿದ್ದು, ಮುಖ್ಯಮಂತ್ರಿಯಾಗಿ ಮಾಣಿಕ್ ಸಹಾ ಅವರು ಇಂದು ಎರಡನೇ ಬಾರಿಗೆ ಅಧಿಕಾರ ಸ್ವೀಕರಿಸಿದ್ದಾರೆ. ಅಗರ್ತಲಾದ ಸ್ವಾಮಿ ವಿವೇಕಾನಂದ ಮೈದಾನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಪ್ರತಿಜ್ಞಾವಿಧಿ ಪಡೆದರು. ಸಿಎಂ ಜೊತೆಗೆ 8 ಮಂದಿ ಶಾಸಕರು ಕೂಡ ಸಚಿವರಾಗಿ ಪ್ರಮಾಣ ವಚನ ಪಡೆದರು.
ಚುನಾವಣೆಗೂ ಮೊದಲು ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಪಕ್ಷ ಅಧಿಕೃತವಾಗಿ ಘೋಷಣೆ ಮಾಡಿರಲಿಲ್ಲ. ಚುನಾವಣಾ ಪ್ರಚಾರದ ವೇಳೆ ಮಾಣಿಕ್ ಸಹಾರನ್ನು ಸಿಎಂ ಮುಖವಾಗಿ ಉಳಿಸಿಕೊಂಡಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೋದಿ- ಮಾಣಿಕ್ ಸಹಾ ಸರ್ಕಾರವನ್ನು ಗೆಲ್ಲಿಸಿ ಎಂದು ಪ್ರಚಾರ ನಡೆಸಿದ್ದರು. ಮೊನ್ನೆ ನಡೆದ ನೂತನ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯಕರಾಗಿ ಮಾಣಿಕ್ ಸಹಾರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು.
ಹಿಂದಿನ ಸಿಎಂ ಬಿಪ್ಲಬ್ ದೇಬ್ ಅವರು ರಾಜೀನಾಮೆ ನೀಡಿದ ನಂತರ, ಮಾಣಿಕ್ ಸಹಾ ಬಿಜೆಪಿಯಲ್ಲಿ ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡರು. ಬಿಜೆಪಿ ನಾಯಕತ್ವವು ದೇಬ್ ಅವರ ಬದಲಿಗೆ ಸಹಾರನ್ನು ಸಿಎಂ ಎಂದು ಘೋಷಿಸಿ ಅಧಿಕಾರ ವಹಿಸಿತ್ತು. ಸೌಮ್ಯ ಸ್ವಭಾವದ ರಾಜಕಾರಣಿ, ವೃತ್ತಿಯಲ್ಲಿ ದಂತ ಶಸ್ತ್ರಚಿಕಿತ್ಸಕರಾಗಿದ್ದ ಸಹಾ ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದರು. 2016ರಲ್ಲಿ ಕೇಸರಿ ಪಕ್ಷ ಸೇರಿಕೊಂಡು, ನಿಷ್ಠೆ ಪ್ರದರ್ಶಿಸಿದರು. ಅಲ್ಲಿಂದ ಬಿಜೆಪಿಯಲ್ಲಿ 'ಮಿಸ್ಟರ್ ಕ್ಲೀನ್' ಎಂದೇ ಅವರು ಬಿಂಬಿತರಾಗಿದ್ದಾರೆ. 2020ರಲ್ಲಿ ರಾಜ್ಯ ಬಿಜೆಪಿ ಘಟಕದ ಮುಖ್ಯಸ್ಥರಾಗಿ, ಬಳಿಕ ರಾಜ್ಯದ ಸಿಎಂ ಆಗಿ ಆಯ್ಕೆಯಾದರು. ಇದೀಗ ಮತ್ತೆ ತ್ರಿಪುರಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಎರಡನೇ ಬಾರಿಗೆ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಅಲ್ಪಾವಧಿಗೆ ರಾಜ್ಯಸಭೆ ಸದಸ್ಯರಾಗಿದ್ದ ಮಾಣಿಕ್ ಸಹಾ, ಬಿಪ್ಲಬ್ ದೇಬ್ ಅವರು ರಾಜೀನಾಮೆ ನೀಡಿದ ಬಳಿಕ 2022ರಲ್ಲಿ ಅಗರ್ತಲಾ ಬಳಿಯ ಟೌನ್ ಬಾರ್ಡೋವಾಲಿ ಕ್ಷೇತ್ರದಿಂದ ಉಪಚುನಾವಣೆಗೆ ಸ್ಪರ್ಧಿಸಿ ಜಯಿಸಿ ವಿಧಾನಸಭೆ ಪ್ರವೇಶಿಸಿದರು. ಹಪಾನಿಯಾದ ತ್ರಿಪುರಾ ಮೆಡಿಕಲ್ ಕಾಲೇಜ್ ಮಾಜಿ ಅಧ್ಯಾಪಕ ಸದಸ್ಯರಾಗಿರುವ ಸಹಾ ಅವರು ತ್ರಿಪುರಾದಲ್ಲಿ ಕಾನೂನು ಸುವ್ಯವಸ್ಥೆಯನ್ನು ಸುಧಾರಿಸುವ ಮೂಲಕ ಉತ್ತಮ ಆಡಳಿತಗಾರ ಎಂದೇ ಗುರುತಿಸಿಕೊಂಡಿದ್ದಾರೆ. ವಿಧಾನಸಭೆ ಚುನಾವಣೆಗೂ ಮುನ್ನ 10 ತಿಂಗಳ ಅಧಿಕಾರದಲ್ಲಿದ್ದ ಸಹಾ ಮುಖ್ಯಮಂತ್ರಿಯಾಗಿ ಬಿಜೆಪಿ ಸರ್ಕಾರದ ಬಗ್ಗೆ ಜನರಲ್ಲಿ ನಂಬಿಕೆ ಮೂಡಿಸಿದ್ದರು.
ಪ್ರಮಾಣ ಸ್ವೀಕರಿಸಿದ ಸಚಿವರು:ಆರ್.ಎಲ್.ನಾಥ್, ಪ್ರಣ್ಜಿತ್ ಸಿಂಗ್ ರಾಯ್, ಸುಶ್ರೀ ಸಂತಾನಾ ಚಕ್ಮಾ, ಸುಶಾಂತ್ ಚೌಧರಿ, ಟಿಂಕು ರಾಯ್, ಬಿಕಾಶ್ ದೆಬ್ಬರ್ಮಾ, ಸುಧಾಂಶು ದಾಸ್ ಮತ್ತು ಸುಕ್ಲಾ ಚರಣ್ ನೋಟಿಯಾ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ, ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು, ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್, ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಉಪಸ್ಥಿತರಿದ್ದರು.
ಚುನಾವಣೆಯಲ್ಲಿ 60 ಸ್ಥಾನಗಳ ಪೈಕಿ ಬಿಜೆಪಿ 32 ಕ್ಷೇತ್ರ ಗೆದ್ದು ಸುಮಾರು ಶೇ 39 ಮತಗಳನ್ನು ಗಳಿಸಿದೆ. ತಿಪ್ರಾ ಮೋತಾ ಪಕ್ಷ 13 ಸ್ಥಾನಗಳನ್ನು ಗೆಲ್ಲುವ ಮೂಲಕ ಎರಡನೇ ಸ್ಥಾನದಲ್ಲಿದೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) 11 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ ಮೂರು ಸ್ಥಾನಗಳನ್ನು ಪಡೆದುಕೊಂಡಿದೆ. ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (IPFT) ಒಂದು ಸ್ಥಾನವನ್ನು ಗೆದ್ದು ಖಾತೆ ತೆರೆದಿದೆ. ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಕೇರಳದಲ್ಲಿ ಪ್ರತಿಸ್ಪರ್ಧಿಗಳಾಗಿದ್ದ ಸಿಪಿಐ(ಎಂ) ಮತ್ತು ಕಾಂಗ್ರೆಸ್ ತ್ರಿಪುರಾದಲ್ಲಿ ಮೈತ್ರಿ ಮಾಡಿಕೊಂಡಿದ್ದವು. ಈ ಮೈತ್ರಿ ಒಟ್ಟು ಮತಗಳಲ್ಲಿ ಶೇಕಡಾ 33 ರಷ್ಟು ಸಾಧನೆ ಮಾಡಿದೆ.
ಇದನ್ನೂ ಓದಿ:ಮಾಡಾಳ್ ವಿರೂಪಾಕ್ಷಪ್ಪ ಇಂದು ಲೋಕಾಯುಕ್ತ ವಿಚಾರಣೆಗೆ ಹಾಜರಾಗುವ ಸಾಧ್ಯತೆ