ಅಗರ್ತಲಾ(ತ್ರಿಪುರಾ): ಮುಖ್ಯಮಂತ್ರಿ ಸ್ಥಾನಕ್ಕೆ ಬಿಪ್ಲಬ್ ಕುಮಾರ್ ದೇವ್ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ತ್ರಿಪುರಾ ನೂತನ ಸಿಎಂ ಆಗಿ ಮಾಣಿಕ್ ಸಹಾ ಆಯ್ಕೆಯಾಗಿದ್ದಾರೆ. ತ್ರಿಪುರಾ ಬಿಜೆಪಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಮಾಣಿಕ್ ಸಹಾಗೆ ಇದೀಗ ಹೈಕಮಾಂಡ್ ಮಣೆ ಹಾಕಿದೆ.2018ರಲ್ಲಿ ತ್ರಿಪುರಾದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದ ಬಿಪ್ಲಬ್ ಕುಮಾರ್ ದೇವ್ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜ್ಯದ ವಿಧಾನಸಭೆ ಚುನಾವಣೆ ನಡೆಯಲು ಕೇವಲ ಒಂದು ವರ್ಷ ಬಾಕಿ ಇರುವಾಗಲೇ ಈ ಬೆಳವಣಿಗೆ ನಡೆದಿದೆ.
ಇದನ್ನೂ ಓದಿ:ತ್ರಿಪುರಾ ಮುಖ್ಯಮಂತ್ರಿ ಸ್ಥಾನಕ್ಕೆ ಬಿಪ್ಲಬ್ ಕುಮಾರ್ ದೇಬ್ ರಾಜೀನಾಮೆ
ಬಿಪ್ಲಬ್ ಕುಮಾರ್ ದೇಬ್ ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಮಾಣಿಕ್ ಸಹಾ ಅವರ ಆಯ್ಕೆ ಮಾಡಲಾಗಿದೆ. ವೃತ್ತಿಯಲ್ಲಿ ದಂತವೈದ್ಯರಾಗಿರುವ ಡಾ. ಸಹಾ, ಕಳೆದ ತಿಂಗಳಷ್ಟೇ ರಾಜ್ಯಸಭಾ ಸಂಸದರಾಗಿ ಆಯ್ಕೆಯಾಗಿದ್ದು, ಬಿಜೆಪಿ ತ್ರಿಪುರಾ ಅಧ್ಯಕ್ಷರಾಗಿದ್ದಾರೆ.
ರಾಜೀನಾಮೆ ನೀಡಿದ ಬಳಿಕ ಮಾತನಾಡಿದ್ದ ದೇಬ್, ಪಕ್ಷ ಎಲ್ಲಕ್ಕಿಂತಲೂ ಮಿಗಿಲಾದುದು. ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ.ನನಗೆ ನೀಡಿರುವ ಜವಾಬ್ದಾರಿ ನಿರ್ವಹಿಸಿದ್ದೇನೆ. ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದು, ಬಿಜೆಪಿಯನ್ನ ಬಲಪಡಿಸಲು ವಿವಿಧ ಕ್ಷೇತ್ರಗಳಲ್ಲಿ ತಳಮಟ್ಟದಿಂದ ಕೆಲಸ ಮಾಡುತ್ತೇನೆ ಎಂದಿದ್ದಾರೆ. ಇದರ ಜೊತೆಗೆ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿರುವ ಡಾ. ಮಾನಿಕ್ ಸಹಾ ಅವರಿಗೆ ಅಭಿನಂದನೆಗಳು ಎಂದಿದ್ದಾರೆ.
ಯಾರಿದು ಮಾಣಿಕ್ ಸಹಾ?:ಆರಂಭದಲ್ಲಿ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿದ್ದ ಇವರು, 2016ರಲ್ಲಿ ಬಿಜೆಪಿಗೆ ಪಕ್ಷಾಂತರಗೊಂಡಿದ್ದರು. 2020ರಲ್ಲಿ ತ್ರಿಪುರಾ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, 2021ರಲ್ಲಿ ನಡೆದ 13 ನಗರಸಭೆ ವಾರ್ಡ್ಗಳ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದರು. ತ್ರಿಪುರಾ ಕ್ರಿಕೆಟ್ ಅಸೋಷಿಯೇಷನ್ ಅಧ್ಯಕ್ಷರಾಗಿ ಸಹ ಸೇವೆ ಸಲ್ಲಿಸುತ್ತಿರುವ ಇವರು, ವೃತ್ತಿಯಲ್ಲಿ ದಂತವೈದ್ಯರು ಎಂಬುದು ಗಮನಾರ್ಹ ವಿಚಾರ.