ಪುಣೆ(ಮಹಾರಾಷ್ಟ್ರ):ಬ್ಯಾಂಕ್ ಸಾಲ, ಟಿವಿ, ಫ್ರಿಡ್ಜ್, ಮೊಬೈಲ್ ಫೋನ್, ಸೇರಿದಂತೆ ವಿವಿಧ ವಸ್ತುಗಳಿಗೆ ಇಎಂಐ ಸೌಲಭ್ಯವಿದೆ. ಇದರಿಂದ ಕಂತುಗಳಲ್ಲಿ ಹಣವನ್ನು ಪಾವತಿ ಮಾಡಬಹುದು. ಅದೇ ರೀತಿ ಮಾವಿನ ಹಣ್ಣು ಖರೀದಿಗೂ ಇಲ್ಲೊಬ್ಬ ವ್ಯಾಪಾರಿ ಇಎಂಐ ಸೌಲಭ್ಯ ನೀಡಿದ್ದಾರೆ. ಅಚ್ಚರಿಯಾದರೂ ಇದು ನಿಜ. ಹಣ್ಣಿನ ರಾಜ ಎಂದೇ ಖ್ಯಾತಿಯಾದ ಅಲ್ಫಾನ್ಸೋ(ಹಪುಸ್) ಮಾವಿನ ಹಣ್ಣಿಗೆ ಮಹಾರಾಷ್ಟ್ರದ ಪುಣೆಯ ವ್ಯಾಪಾರಿ ಗೌರವ್ ಸನಾಸ್ ಇಎಂಐ ಮೂಲಕ ಹಣ ಪಾವತಿ ಮಾಡುವ ಅವಕಾಶ ನೀಡಿದ್ದಾರೆ.
ಹೆಚ್ಚುತ್ತಿರುವ ಹಣದುಬ್ಬರದಿಂದ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದೆ. ಅದರಂತೆ ಅಲ್ಫಾನ್ಸೋ ಮಾವಿನ ಹಣ್ಣಿನ ದರವೂ ಗಗನಮುಖಿಯಾಗಿದೆ. ಇದರಿಂದ ಖರೀದಿ ಮಾಡಲು ಜನರು ಹಿಂದೇಟು ಹಾಕುತ್ತಿದ್ದಾರೆ. ಎಲ್ಲಾ ಜನರು ಹಣ್ಣಿನ ಸವಿಯನ್ನು ಪಡೆಯಲು ನೂತನ ಹಾದಿಯನ್ನು ಕಂಡುಕೊಂಡಿದ್ದಾರೆ. ಮಾವು ಖರೀದಿ ಮಾಡಿದವರು ತಕ್ಷಣಕ್ಕೆ ಹಣ ಪಾವತಿ ಮಾಡಲಾಗದಿದ್ದರೆ, ಇಎಂಐ ಮೂಲಕ ಉಳಿದ ಹಣವನ್ನು ಪಾವತಿಸಬಹುದು.
ಗೌರವ್ ಸನಾಸ್ ಅವರು ಪುಣೆಯ ಆನಂದ್‌ನಗರದ ಗ್ರೀನ್ ಮ್ಯಾಂಗೋಸ್‌ನ ಮಾಲೀಕರಾಗಿದ್ದಾರೆ. ಅಲ್ಫಾನ್ಸೊ ಮಾವು ಪ್ರೇಮಿಗಳು ಹಣಕಾಸಿನ ತೊಂದರೆಯನ್ನು ಬದಿಗಿಟ್ಟು "ಈಗ ತಿನ್ನಿ, ನಂತರ ಪಾವತಿಸಿ" ಎಂದು ಘೋಷಿಸಿದ್ದಾರೆ. ಜನರು ಹಣ್ಣು ಖರೀದಿಸಿದ ಬಳಿಕ ಪಾಯಿಂಟ್-ಆಫ್-ಸೇಲ್ (ಪಿಒಎಸ್) ಮೂಲಕ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸಿ ಹಣವನ್ನು ಪಾವತಿಸಬಹುದು. ಬಿಲ್ ಮೊತ್ತವನ್ನು ಮೂರರಿಂದ 18 ತಿಂಗಳ ಇಎಂಐ ಕೂಡ ಇಲ್ಲಿ ಲಭ್ಯವಿದೆ.
ಒಂದು ಕೆಜಿ ಅಲ್ಫಾನ್ಸೊ ಮಾವಿನ ಬೆಲೆ ಕೆಜಿಗೆ ಬೆಲೆ 600 ರಿಂದ 1,300 ರೂ. ಇದೆ. 4 ಸಾವಿರ ರೂಪಾಯಿಯಷ್ಟು ಮಾವನ್ನು ಖರೀದಿಸಿದಲ್ಲಿ ಇಷ್ಟು ಮೊತ್ತವನ್ನು ಒಮ್ಮೆಗೆ ಕಟ್ಟಲು ಆಗದಿದ್ದರೆ ಖರೀದಿದಾರರು, ಬ್ಯಾಂಕ್‌ನಿಂದ ವಿಧಿಸಲಾದ ವೆಚ್ಚವನ್ನು ಒಳಗೊಂಡಂತೆ ತಿಂಗಳಿಗೆ 700 ರೂ.ಗಳಂತೆ 6 ಇಎಂಐಗಳಲ್ಲಿ ಮೊತ್ತವನ್ನು ಪಾವತಿಸಲು ಆಯ್ಕೆ ಮಾಡಿಕೊಳ್ಳಬಹುದು.