ಜಲ್ಪೈಗುರಿ (ಪಶ್ಚಿಮ ಬಂಗಾಳ): ಸರ್ಕಾರದ ಉನ್ನತ ಅಧಿಕಾರಿಯಾಗಬೇಕು. ಐಎಎಸ್, ಐಪಿಎಸ್ ಹುದ್ದೆಗೆ ಏರಬೇಕೆಂಬ ಆಸೆಯನ್ನು ಬಾಲ್ಯದಲ್ಲೇ ಬಹುತೇಕ ವಿದ್ಯಾರ್ಥಿಗಳು ಕಂಡಿರುತ್ತಾರೆ. ಆದರೆ, ಯಾವುದೋ ಕಾರಣ, ಸಮಸ್ಯೆ ಹಾಗೂ ನಾನಾ ಅಡತಡೆಗಳು ಬಹುಪಾಲು ವಿದ್ಯಾರ್ಥಿಗಳ ಕನಸನ್ನು ಅರ್ಧದಲ್ಲಿ ಕಮರಿ ಹೋಗುವಂತೆ ಮಾಡುತ್ತವೆ. ಇದರ ನಡುವೆಯೂ ಛಲವೊಂದಿದ್ದರೆ ಏನಾದರೂ ಸಾಧಿಸಬಹುದು ಎಂಬ ಎಷ್ಟೋ ನಿದರ್ಶನಗಳನ್ನು ನಾವು ಕಂಡಿದ್ದೇವೆ. ಜೀವನದಲ್ಲಿ ಎದುರಾಗುವ ಎಂತಹದ್ದೇ ಅಡ್ಡಿ ಮತ್ತು ಆತಂಕಗಳನ್ನು ಮೆಟ್ಟಿ ನಿಲ್ಲಬಹುದು ಎಂಬುವುದಕ್ಕೆ ಇದುವರೆಗೆ ಅನೇಕರು ಸಾಕ್ಷಿಯಾಗಿದ್ದಾರೆ.
ಇಂತಹ ಸ್ಫೂರ್ತಿ ಮತ್ತು ಪ್ರತಿಭಾವಂತರಲ್ಲಿ ಪಶ್ಚಿಮ ಬಂಗಾಳದ ಜಲ್ಪೈಗುರಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮೇಶ್ ಗಣಪತ್ ಖಂಡಬಹಲ್ ಕೂಡ ಒಬ್ಬರಾಗಿದ್ದಾರೆ. ಹೌದು, ಮಹಾರಾಷ್ಟ್ರದ ಮೂಲದ ಉಮೇಶ್ 2003ರಲ್ಲಿ 12ನೇ ತರಗತಿಯಲ್ಲಿ ಅನುತ್ತೀರ್ಣರಾಗಿದ್ದರು. ಇಂಗ್ಲಿಷ್‌ನಲ್ಲಿ ಕೇವಲ 21 ಅಂಕಗಳನ್ನು ಮಾತ್ರ ಪಡೆದಿದ್ದರು. ಇನ್ನೇನು ಇಲ್ಲಿಗೆ ಶೈಕ್ಷಣಿಕ ಜೀವನ ಮುಗಿತು ಎಂದೇ ಭಾವಿಸಿದ್ದರು. ಅಲ್ಲದೇ, ಮುಂದಿನ ಓದಿನ ಆಸೆ ಬಿಟ್ಟು ಬೇಸಾಯ ಮಾಡಲು ಅಣಿಯಾಗಿದ್ದರು. ಆದರೆ, ಇಂದು ಅದೇ ಉಮೇಶ್ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ್ದಾರೆ. ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಪಾಸ್ ಮಾಡಿ ಐಪಿಎಸ್ ಅಧಿಕಾರಿಯಾಗಿದ್ದಾರೆ.
ಅನುತ್ತೀರ್ಣವೇ ಅಂತ್ಯವಲ್ಲ: ಉಮೇಶ್ ಗಣಪತ್ 12ನೇ ತರಗತಿಯಲ್ಲಿ ಫೇಲ್ ಆದ ನಂತರ ಮಹಿರವಾಣಿ ಗ್ರಾಮದಲ್ಲಿ ಕೃಷಿಕರಾಗಿ ಕೆಲಸ ಮಾಡುತ್ತಿದ್ದರು. ಎರಡು ವರ್ಷ ಹೀಗೇ ತಮ್ಮ ತಂದೆಯೊಂದಿಗೆ ಕೃಷಿಯಲ್ಲಿ ತೊಡಗಿದ್ದರು. ಆದರೆ, ಸ್ನೇಹಿತರ ಸಲಹೆ ಮೇರೆಗೆ ನಿರ್ಧಾರ ಬದಲಿಸಿಕೊಂಡು ಉಮೇಶ್ ಮತ್ತೆ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸುವ ಬಗ್ಗೆ ಯೋಚನೆ ಮಾಡಿದರು. ಈ ಮೂಲಕ ಪರೀಕ್ಷೆಯ ಅನುತ್ತೀರ್ಣವೇ ಜೀವನದ ಅಂತ್ಯವಲ್ಲ ಎಂಬುವದನ್ನು ನಿರೂಪಿಸಿದ್ದಾರೆ. ದೃಢವಾದ ಮನಸ್ಸು ಮತ್ತು ಸ್ಥಿರವಾದ ಗುರಿಯು ನಮ್ಮಲ್ಲಿ ಯಾವುದೇ ಬದಲಾವಣೆಯನ್ನು ಮಾಡಬಲ್ಲದು ಎಂಬುದನ್ನು ಉಮೇಶ್ ಗಣಪತ್ ನಂಬಿದ್ದಾರೆ.
''ನನ್ನ ಬಾಲ್ಯದ ಶಿಕ್ಷಣ ನಾಸಿಕ್‌ನಲ್ಲಿ ಕಳೆದಿದೆ. ಹೈಸ್ಕೂಲ್ ಮತ್ತು ಕೆಟಿಎಚ್‌ಎಂ ಜೂನಿಯರ್ ಕಾಲೇಜಿನಲ್ಲಿ 11 ಮತ್ತು 12ನೇ ತರಗತಿ ಓದಿದೆ. ನಾನು ಯಾವಾಗಲೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದೆ. ಆದರೆ, ಇಂಗ್ಲಿಷ್‌ನಲ್ಲಿ ಕೇವಲ 21 ಅಂಕಗಳು ಬಂದವು. ಇದರಿಂದ ನಾನು ಪರೀಕ್ಷೆಯಲ್ಲಿ ಅನುತ್ತೀರ್ಣನಾದೆ. ಹೀಗಾಗಿ ಇನ್ಮುಂದೆ ಓದುವುದಿಲ್ಲ ಎಂಬ ನಿರ್ಧಾರಕ್ಕೆ ಎಂದಿದ್ದೆ'' ಎಂದು ಎಸ್ಪಿ ಉಮೇಶ್ ಗಣಪತ್ ತಿಳಿಸಿದರು.