ಕೊಚ್ಚಿ(ಕೇರಳ) :ಕೊಚ್ಚಿಯ ಕಲಮಶ್ಶೇರಿ ಎಂಬಲ್ಲಿ ಕಳೆದ ಭಾನುವಾರ ಯೆಹೋವನ ಪ್ರಾರ್ಥನಾ ಸಭೆ ವೇಳೆ ನಡೆದ ಸ್ಫೋಟ ಪ್ರಕರಣ ಸಂಬಂಧ ವಿಶೇಷ ತನಿಖಾ ದಳದ ಅಧಿಕಾರಿಗಳು ಉನ್ನತಮಟ್ಟದ ತನಿಖೆ ನಡೆಸುತ್ತಿದ್ದಾರೆ. ಸ್ಫೋಟ ಪ್ರಕರಣದಲ್ಲಿ ಓರ್ವ ಬಾಲಕಿ ಸೇರಿ ಮೂವರು ಸಾವನ್ನಪ್ಪಿದ್ದು, 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಸ್ಫೋಟ ನಡೆದ ಕೆಲವು ಗಂಟೆಗಳ ಬಳಿಕ ಡೊಮಿನಿಕ್ ಮಾರ್ಟಿನ್ ಎಂಬ ವ್ಯಕ್ತಿ ಸ್ಫೋಟದ ಹೊಣೆಗಾರಿಕೆ ಹೊತ್ತು ಪೊಲೀಸರಿಗೆ ಶರಣಾಗಿದ್ದನು. ಈತನನ್ನು ವಿಶೇಷ ತನಿಖಾ ದಳದ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಆರೋಪಿಯು ಗಲ್ಫ್ನಿಂದ ಹೆಚ್ಚಿನ ಸಂಬಳದ ಉದ್ಯೋಗವನ್ನು ತೊರೆದು ಬಂದಿದ್ದಾನೆ. ಮಾರ್ಟಿನ್ ತೀಕ್ಷ್ಣ ಬುದ್ಧಿ ಉಳ್ಳವನು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಸೋಮವಾರ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ವಿಶೇಷ ತನಿಖಾ ದಳದ ಅಧಿಕಾರಿಗಳು, ಮಂಗಳವಾರ ಆಲುವಾದ ಅಥನಿಯಲ್ಲಿರುವ ಆರೋಪಿಯ ಮನೆಗೆ ಕರೆದುಕೊಂಡು ಬಂದು ಶೋಧ ಕಾರ್ಯ ನಡೆಸಿದ್ದಾರೆ. ಈ ಮನೆಯಲ್ಲಿಯೇ ಆರೋಪಿ ಸ್ಪೋಟಕವನ್ನು ತಯಾರಿಸಿರುವುದಾಗಿ ಅಧಿಕಾರಿಗಳು ಶಂಕಿಸಿದ್ದಾರೆ.
ಕಳೆದ ಭಾನುವಾರ ಪೊಲೀಸರಿಗೆ ಶರಣಾಗಿದ್ದ ಮಾರ್ಟಿನ್, ತಾನು ಸ್ಪೋಟ ಕೃತ್ಯ ಎಸಗಲು ವಸ್ತುಗಳನ್ನು ಖರೀದಿಸಿದ್ದ ಬಗ್ಗೆ ಬಿಲ್ನ್ನು ಪೊಲೀಸರಿಗೆ ನೀಡಿದ್ದನು. ಜೊತೆಗೆ ಪೆಟ್ರೋಲ್ ಖರೀದಿಸಿರುವ ಬಿಲ್ನ್ನು ಆರೋಪಿ ನೀಡಿದ್ದನು. ಇದು ಆರೋಪಿ ಕೃತ್ಯ ಎಸಗಿರುವ ಬಗ್ಗೆ ಪ್ರಾಥಮಿಕ ಸಾಕ್ಷಿ ಆಗಿದೆ. ಜೊತೆಗೆ ಮಾರ್ಟಿನ್ ಅಸಾಧಾರಣ ಬುದ್ಧಿಯನ್ನು ಹೊಂದಿದ್ದಾನೆ. ದುಷ್ಕೃತ್ಯ ಎಸಗಲು ಆರೋಪಿಯು ಗಲ್ಫ್ ದೇಶದಲ್ಲಿನ ಹೆಚ್ಚಿನ ಸಂಬಳದ ಉದ್ಯೋಗ ಸಂಬಳವನ್ನು ತ್ಯಜಿಸಿ ಬಂದಿರುವುದು ತಿಳಿದುಬಂದಿದೆ. ಆರೋಪಿಯು ಎಲೆಕ್ಟ್ರಾನಿಕ್ಸ್ನಲ್ಲಿ ಹೆಚ್ಚಿನ ಪ್ರಾವೀಣ್ಯತೆ ಹೊಂದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.