ಹೈದರಾಬಾದ್ (ತೆಲಂಗಾಣ): ಗ್ರಾಹಕರಿಗೆ ಬೇಕಾದ ಆಹಾರವನ್ನು ಕುಳಿತಲ್ಲಿಗೆ ತಲುಪಿಸುವಲ್ಲಿ ಜೊಮ್ಯಾಟೊ ಸಾಕಷ್ಟು ಹೆಸರು ಮಾಡಿದೆ. ಇದರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ತನ್ನ ಚಮತ್ಕಾರಿ ಪೋಸ್ಟ್ಗಳಿಂದಲೂ ಜೊಮ್ಯಾಟೊ ಗಮನ ಸೆಳೆಯುತ್ತದೆ. ಇದೀಗ ಗಾಂಜಾ ತಲುಪಿಸುತ್ತೀರಾ ಎಂದು ಗ್ರಾಹಕರೊಬ್ಬರು ಕೇಳಿಕೊಂಡ ಬಗ್ಗೆ ಜೊಮ್ಯಾಟೊ ಬಹಿರಂಗ ಪಡಿಸಿದೆ. ಇದು ಸಾಕಷ್ಟು ಸದ್ದು ಮಾಡುತ್ತಿದೆ.
ಹೌದು, ಇಂದು ಇಡೀ ದೇಶ ಹೋಳಿ ಹಬ್ಬದ ಮೂಡ್‌ನಲ್ಲಿದೆ. ಆಹಾರ ವಿತರಣಾ ಕಂಪನಿಯಾದ ಜೊಮ್ಯಾಟೊ, ರಾಷ್ಟ್ರ ರಾಜಧಾನಿ ದೆಹಲಿ ಸಮೀಪದ ಗುರುಗ್ರಾಮ್ನ ಸುಭಮ್ ಎಂಬಾತ ಗಾಂಜಾ ಕೇಳಿರುವ ಬಗ್ಗೆ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ. ''ಗುರುಗ್ರಾಮ್ನ ಶುಭಮ್ 14 ಬಾರಿ ಭಾಂಗ್ ಕಿ ಗೋಲಿ (ಗಾಂಜಾ) ತಲುಪಿಸುತ್ತೀರಾ ಕೇಳಿದ್ದಾರೆ. ಯಾರಾದರೂ ದಯವಿಟ್ಟು ಆತನಿಗೆ ಹೇಳಿ ನಾವು ಗಾಂಜಾವನ್ನು ತಲುಪಿಸುವುದಿಲ್ಲ'' ಎಂದು ಜೊಮ್ಯಾಟೊ ಟ್ವೀಟ್ ಮಾಡಿದೆ.
ತಕ್ಷಣವೇ ಟ್ವೀಟ್ ವೈರಲ್: ಗಾಂಜಾ ಕೇಳಿರುವ ಬಗ್ಗೆ ಜೊಮ್ಯಾಟೊ ಟ್ವೀಟ್ ಮಾಡಿದ ಮರು ಕ್ಷಣವೇ ನೆಟ್ಟಿಜನ್ಗಳ ಗಮನ ಸೆಳೆದಿದೆ. ಅಲ್ಲದೇ, ಈ ಟ್ವೀಟ್ ಎಲ್ಲೆಡೆ ವೈರಲ್ ಆಗಿದೆ. ಇದೇ ವೇಳೆ ದೆಹಲಿ ಪೊಲೀಸರ ಗಮನವನ್ನೂ ಗಾಂಜಾ ಕುರಿತ ಟ್ವೀಟ್ ಸೆಳೆದಿದೆ. ಅಂತೆಯೇ, ಪೊಲೀಸರು ಕೂಡ ಟ್ವೀಟ್ ಮಾಡಿ, ''ಯಾರಾದರೂ ಶುಭಮ್ರನ್ನು ಭೇಟಿಯಾದರೆ.... ಅವರಿಗೆ ಭಾಂಗ್ ಸೇವಿಸಿ ವಾಹನ ಚಲಾಯಿಸಬೇಡಿ ಎಂದು ಹೇಳಿ'' ಅಂತಾ ತಿಳಿಸಿದ್ದಾರೆ.
ಇಷ್ಟೇ ಅಲ್ಲ, ಜೊಮ್ಯಾಟೊ ಈ ಟ್ವೀಟ್ಗೆ ತರಹೇವಾರಿ ಪ್ರತಿಕ್ರಿಯೆಗಳು ಕೂಡ ವ್ಯಕ್ತವಾಗಿವೆ. ''ಹಲೋ ಜೊಮ್ಯಾಟೊ ನಾನು ದೆಹಲಿಯಲ್ಲಿ ವಾಸಿಸುತ್ತಿದ್ದೇನೆ, ಗುರುಗ್ರಾಮ್ ಅಲ್ಲ. ಪ್ರತಿ ವರ್ಷ ಹೋಳಿಯಲ್ಲಿ ಭಾಂಗ್ ಸೇವಿಸುವುದು ಒಂದು ಆಚರಣೆಯಾಗಿದೆ. ಏಕೆಂದರೆ ನನ್ನ ಜನ್ಮದಿನವು ಹೋಳಿಯಂದು ಬರುತ್ತದೆ. ದಯವಿಟ್ಟು ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ'' ಎಂದು ಶುಭಮ್ ಹೆಸರಿನ ಟ್ವಿಟಿರ್ ಖಾತೆಯ ಬಳಕೆದಾರರು ಬರೆದುಕೊಂಡಿದ್ದಾರೆ. ಮತ್ತೊಬ್ಬರು, "ಹಲೋ ಶುಭಮ್ ಭಾಯ್, ಹೋಳಿಯಲ್ಲಿ ಕುಡಿಯದೆ ಭಾಂಗ್ ಇದ್ದರೆ ಯಾವುದೇ ಮಾಜಾ ಇರುವುದಿಲ್ಲ'' ಎಂದು ಟ್ವೀಟ್ ಮಾಡಿದ್ದಾರೆ.
ಜೊಮ್ಯಾಟೊ ಎಡವಟ್ಟು: ಮತ್ತೊಂದೆಡೆ, ಜೊಮ್ಯಾಟೊ ಎಡವಟ್ಟು ಮಾಡಿರುವುದು ಸೋಷಿಯಲ್ ಮೀಡಿಯಾದಲ್ಲಿ ಬೆಳಕಿಗೆ ಬಂದಿದೆ. ಸಸ್ಯಹಾರ ಆರ್ಡರ್ ಮಾಡಿದ್ದ ಗ್ರಾಹಕರೊಬ್ಬರಿಗೆ ಮಾಂಸಾಹಾರ ಡೆಲಿವರಿ ಮಾಡಲಾಗಿದೆ. ಈ ಬಗ್ಗೆ ನಿರುಪಮಾ ಸಿಂಗ್ ಎಂಬುವವರು ವಿಡಿಯೋ ಸಮೇತ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ''ಹಾಯ್ ಜೊಮ್ಯಾಟೊ, ನಾವೆಲ್ಲ ವೆಜ್ ಫುಡ್ ಆರ್ಡರ್ ಮಾಡಿದ್ದೆವು. ಆದರೆ, ಎಲ್ಲರಿಗೆ ನಾನ್ ವೆಜ್ ಫುಡ್ ಪಡೆದಿದ್ದೇವೆ. ನಮ್ಮಲ್ಲಿರುವ ಐವರಲ್ಲಿ ನಾಲ್ವರು ಸಸ್ಯಾಹಾರಿಗಳು. ಈ ಏನು ಸರ್ವೀಸ್ ಇದ... ಭಯಾನಕ ಅನುಭವ ಎಂದು ಬರೆದುಕೊಂಡಿದ್ದಾರೆ.
ಇದಕ್ಕೆ ಜೊಮ್ಯಾಟೊ ಸಹ ಪ್ರತಿಕ್ರಿಯಿಸಿ ಕ್ಷಮೆ ಕೋರಿದೆ. ''ಹಾಯ್ ನಿರುಪಮಾ, ಈ ದುರ್ಘಟನೆಗಾಗಿ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ಇದನ್ನು ಮತ್ತಷ್ಟು ತನಿಖೆ ಮಾಡಲು ದಯವಿಟ್ಟು ನಿಮ್ಮ ನೋಂದಾಯಿತ ಫೋನ್ ಸಂಖ್ಯೆಯನ್ನು ಖಾಸಗಿ ಸಂದೇಶದ ಮೂಲಕ ಹಂಚಿಕೊಳ್ಳಿ ಎಂದು ಜೊಮ್ಯಾಟೊ ಪ್ರತಿ ಟ್ವೀಟ್ ಮಾಡಿದೆ. ಅಚ್ಚರಿ ಎಂದರೆ ಟ್ವಿಟರ್‌ನಲ್ಲಿ ಈ ವಿಡಿಯೋವನ್ನು ಒಂದು ಮಿಲಿಯನ್ ಜನ ವೀಕ್ಷಿಸಿದ್ದಾರೆ.
ಇದನ್ನೂ ಓದಿ:ಜೊಮ್ಯೊಟೊ ಸಹ ಸಂಸ್ಥಾಪಕ ಗುಂಜನ್ ಪಾಟೀದಾರ್ ರಾಜೀನಾಮೆ