ನವದೆಹಲಿ: ದೇಶಾದ್ಯಂತ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವ 37 ವರ್ಷದ ನಕಲಿ ವೈದ್ಯನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಕಳೆದ 8 ವರ್ಷಗಳಿಂದ 11 ವಿವಿಧ ಆಸ್ಪತ್ರೆಗಳು, ಕ್ಲಿನಿಕ್ಗಳು, ನರ್ಸಿಂಗ್ ಹೋಂಗಳಲ್ಲಿ ಕೆಲಸ ಮಾಡಿದ್ದು, ತಿಂಗಳಿಗೆ ಒಂದೂವರೆ ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದ.
ಇಬ್ಬರ ಜತೆ ಮದುವೆ, ಮೋಸ
27 ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮನೀಶ್ ಕೌಲ್ನನ್ನು ಉತ್ತರಪ್ರದೇಶದ ಮೀರತ್ನಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಯುವತಿಯರನ್ನು ಮದುವೆಯಾಗಿ ವಂಚಿಸಿದ್ದ ಎಂದು ತಿಳಿದುಬಂದಿದೆ.
ಜೈಲಿನಿಂದ ತಪ್ಪಿಸಿಕೊಂಡಿದ್ದ
2019 ರಲ್ಲಿ ಮುಂಬೈನಲ್ಲಿ ದೆಹಲಿ ಪೊಲೀಸರ 3 ನೇ ಬೆಟಾಲಿಯನ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದನಂತೆ. ವರುಣ್ ಕೌಲ್, ವಿಕ್ರಾಂತ್, ಭಗತ್ ಸೇರಿ ತುಂಬಾ ಹೆಸರುಗಳನ್ನಿಟ್ಟುಕೊಂಡಿದ್ದ ಆರೋಪಿ, ದೆಹಲಿ, ಮುಂಬೈ, ಪಂಚಕುಲ, ಬೆಂಗಳೂರು, ಗೋವಾ, ಕೇರಳ, ಅಂಬಾಲಾ ಸೇರಿ ಹಲವಾರು ಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾನೆ. ಹಾಗಾಗಿ ಬಹುತೇಕ ನಗರಗಳಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿದೆ.