ನವದೆಹಲಿ:ಸಾರ್ವಜನಿಕ ಆಸ್ತಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಎಷ್ಟೇ ಅರಿವು ಮೂಡಿಸಿದರೂ ಕೆಲ ಬುದ್ಧಿಗೇಡಿಗಳು ಮಾತ್ರ ಇದಕ್ಕೆ ಸೊಪ್ಪು ಹಾಕುವುದಿಲ್ಲ. ಕಂಠಪೂರ್ತಿ ಕುಡಿದಿದ್ದ ವ್ಯಕ್ತಿಯೊಬ್ಬ ದೆಹಲಿ ಮೆಟ್ರೋ ನಿಲ್ದಾಣದ ಪ್ಲಾಟ್ ಫಾರ್ಮ್ನ ಹಳಿಗಳ ಮೇಲೆ ಜನರು ಇರುವಾಗಲೇ ಮೂತ್ರ ವಿಸರ್ಜನೆ ಮಾಡಿದ ಅಸಹ್ಯಕರ ಘಟನೆ ಬೆಳಕಿಗೆ ಬಂದಿದೆ. ಇದನ್ನು ಮತ್ತೊಬ್ಬರು ವಿಡಿಯೋ ಮಾಡಿದ್ದು, ವೈರಲ್ ಆಗಿದೆ.
ವಿಡಿಯೋದಲ್ಲಿ ಕಾಣುವಂತೆ ಅಮಲಿನಲ್ಲಿದ್ದ ವ್ಯಕ್ತಿ ಮೆಟ್ರೋ ನಿಲ್ದಾಣವೊಂದರಲ್ಲಿ ಹಾಕಲಾದ ಹಳದಿ ಗೆರೆಯನ್ನು ದಾಟಿ ಹಳಿಗಳ ಮೇಲೆ ಮೂತ್ರವಿಸರ್ಜನೆ ಮಾಡುತ್ತಿದ್ದು, ಮತ್ತೊಬ್ಬರು ವಿಡಿಯೋ ಮಾಡುತ್ತಾ ಇದನ್ನು ಪ್ರಶ್ನಿಸಿದ್ದಾರೆ. ಆಗ ಆತ "ಕುಡಿದಿದ್ದು ಹೆಚ್ಚಾಗಿದೆ, ಮುಗಿಯಿತು" ಎನ್ನುತ್ತಾ ತನ್ನ ಮಹತ್ಕಾರ್ಯವನ್ನು ಮುಂದುವರಿಸಿದ್ದಾನೆ.
ಈ ಘಟನೆ ಅಕ್ಟೋಬರ್ 29 ರಂದು ನಡೆದಿದೆ ಎನ್ನಲಾಗಿದ್ದು, ಸಂಜೀವ್ ಬಬ್ಬರ್ ಎಂಬುವವರು ತಮ್ಮ ಟ್ವಿಟರ್ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. "ಇದನ್ನು ನಾನು ಈಗಷ್ಟೇ ವಾಟ್ಸ್ಆ್ಯಪ್ ಮೂಲಕ ಪಡೆದಿದ್ದು, ಇದನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ" ಎಂದು ಬರೆದುಕೊಂಡಿದ್ದಾರೆ.