ಕರ್ನಾಟಕ

karnataka

ETV Bharat / bharat

ಅಜಂ ಖಾನ್ ಮನೆಯೊಳಗೆ ಮಾಟ ಮಂತ್ರದ ವಸ್ತು ಎಸೆದ ವ್ಯಕ್ತಿ ಅರೆಸ್ಟ್​: ನಾಲ್ವರು ಪೊಲೀಸರು ಸಸ್ಪೆಂಡ್​ - ಉತ್ತರ ಪ್ರದೇಶದ ಪೊಲೀಸರು

ಉತ್ತರ ಪ್ರದೇಶದ ರಾಂಪುರ ಪಟ್ಟಣದಲ್ಲಿರುವ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಮನೆಯೊಳಗೆ ಮಾಟ ಮಂತ್ರದ ವಸ್ತುಗಳನ್ನು ಎಸೆದ ಪ್ರಕರಣ ಬೆಳಕಿಗೆ ಬಂದಿದೆ.

man-throwing-black-magic-bundle-inside-azam-khans-house
ಅಜಂ ಖಾನ್ ಮನೆಯೊಳಗೆ ಮಾಟ ಮಂತ್ರದ ವಸ್ತುಗಳ ಎಸೆದ ವ್ಯಕ್ತಿ ಅರೆಸ್ಟ್​: ನಾಲ್ವರು ಪೊಲೀಸರು ಸಸ್ಪೆಂಡ್​

By

Published : Apr 1, 2023, 12:55 PM IST

ರಾಂಪುರ (ಉತ್ತರ ಪ್ರದೇಶ):ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಅವರ ಮನೆಯೊಳಗೆ ಮಾಟ ಮಂತ್ರದ ವಸ್ತುಗಳನ್ನು ಎಸೆದ ಆರೋಪದ ಮೇಲೆ ವ್ಯಕ್ತಿಯೊಬ್ಬನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ಕರ್ತವ್ಯ ಲೋಪದ ಆರೋಪದಲ್ಲಿ ಖಾನ್ ಮನೆಯ ಹೊರಗೆ ನಿಯೋಜಿಸಲಾದ ನಾಲ್ವರು ಪೊಲೀಸ್​ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ತಮ್ಮ ಮನೆಯ ಮುಖ್ಯ ಗೇಟ್‌ನೊಳಗೆ ಬಟ್ಟೆ ಸೇರಿದಂತೆ ಮಾಟ ಮಂತ್ರದ ವಸ್ತುಗಳನ್ನು ಒಳಗೊಂಡಿರುವ ಸಣ್ಣ ಬಂಡಲ್ ಎಸೆಯಲಾಗಿದೆ ಎಂದು ಅಜಂ ಖಾನ್ ಪತ್ನಿ, ಮಾಜಿ ಸಂಸದೆ ತಜೀನ್ ಫತ್ಮಾ ಪೊಲೀಸರಿಗೆ ದೂರು ನೀಡಿದ್ದರು. ಇದೇ ಗುರುವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮನೆಯ ಹೊರಗೆ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ವ್ಯಕ್ತಿಯೊಬ್ಬ ಮೂಟೆಯನ್ನು ಎಸೆಯುತ್ತಿರುವುದು ಸೆರೆಯಾಗಿದೆ. ಆದರೆ, ಈತನ ಗುರುತು ತಕ್ಷಣಕ್ಕೆ ಪತ್ತೆಯಾಗಿಲ್ಲ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದರು.

ಅಲ್ಲದೇ, ಈ ಘಟನೆಯ ಕುರಿತು ತಜೀನ್​ ಫತ್ಮಾ, ರಾಂಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಇದೊಂದು ದೊಡ್ಡ ಪಿತೂರಿಯ ಭಾಗವಾಗಿರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಮನೆ ಸುತ್ತ ರಾಜ್ಯದ ಪೊಲೀಸರು ಮತ್ತು ಇತರ ಭದ್ರತಾ ಸಿಬ್ಬಂದಿ ಹಗಲು ರಾತ್ರಿ ಕಾವಲು ಕಾಯುತ್ತಿದ್ದಾರೆ. ಆದರೂ, ಇಂತಹ ಘಟನೆ ಮತ್ತು ಪೊಲೀಸ್​ ಭದ್ರತೆಯ ಉಲ್ಲಂಘನೆ ಹೇಗೆ ಸಂಭವಿಸಿರಬಹುದು ಎಂದೂ ಪ್ರಶ್ನೆ ಮಾಡಿದ್ದರು.

ಆರೋಪಿ ಮಾನಸಿಕ ಅಸ್ವಸ್ಥ: ಅಂತೆಯೇ, ಈ ಬಗ್ಗೆ ತನಿಖೆ ಕೈಗೊಂಡು ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕುಮಾರ್ ಶುಕ್ಲಾ ಪ್ರತಿಕ್ರಿಯೆ ನೀಡಿದ್ದು, ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ಅಜಂ ಖಾನ್ ಅವರ ಮನೆಯೊಳಗೆ ಬಟ್ಟೆಯ ಸಣ್ಣ ಮೂಟೆಯೊಂದನ್ನು ಎಸೆದಿದ್ದ. ಈಗಾಗಲೇ ಆತನನ್ನು ಬಂಧಿಸಲಾಗಿದೆ. ಆರೋಪಿಯು ಮಾನಸಿಕ ಅಸ್ವಸ್ಥನಾಗಿರುವುದರಿಂದ ಮನೋರೋಗ ಚಿಕಿತ್ಸಾಲಯಕ್ಕೆ ರವಾನಿಸಲು ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಜೊತೆಗೆ ಅಜಂ ಖಾನ್ ಅವರ ಮನೆಗೆ ಭದ್ರತೆಗೆ ನಿಯೋಜಿಸಲಾಗಿದ್ದ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯ ಲೋಪದ ಆಧಾರದ ಮೇಲೆ ಅಮಾನತುಗೊಳಿಸಲಾಗಿದೆ ಎಂದು ಎಸ್​ಪಿ ಶುಕ್ಲಾ ಸ್ಪಷ್ಟಪಡಿಸಿದ್ದಾರೆ. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಸಾರ್ ಸಿಂಗ್ ಮಾತನಾಡಿ, ಖಾನ್ ಅವರ ಮನೆಯೊಳಗೆ ಕಪ್ಪು ಹಾಳೆಯಿಂದ ಸುತ್ತಿದ ಬಂಡಲ್ ಎಸೆಯಲಾಗಿತ್ತು. ಮತ್ತು ಅದರಲ್ಲಿ ಕೆಲ ಬಟ್ಟೆಗಳು, ಒಂದು ಕ್ಯಾಪ್ ಮತ್ತು ಇತರ ಕೆಲವು ವಸ್ತುಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ಅಜಂ ಖಾನ್ ಅನರ್ಹ ಶಾಸಕ:ರಾಂಪುರ ಪಟ್ಟಣದಲ್ಲಿ ಅಜಂ ಖಾನ್ ಮನೆ ಇದೆ. ರಾಂಪುರ ಲೋಕಸಭಾ ಕ್ಷೇತ್ರದಿಂದ ಸಂಸದ ಮತ್ತು ರಾಂಪುರ ವಿಧಾನಸಭಾ ಕ್ಷೇತ್ರದಿಂದ 10 ಬಾರಿ ಶಾಸಕರಾಗಿದ್ದಾರೆ. ದ್ವೇಷ ಭಾಷಣದ ಪ್ರಕರಣದಲ್ಲಿ ಕಳೆದ ವರ್ಷ ಅಕ್ಟೋಬರ್​ನಲ್ಲಿ ಸ್ಥಳೀಯ ನ್ಯಾಯಾಲಯವು ಮೂರು ವರ್ಷದ ಜೈಲು ಶಿಕ್ಷೆ ಪ್ರಕಟಿಸಿತ್ತು. ಇದರ ನಂತರ ವಿಧಾನಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ.

ಅಜಂ ಖಾನ್​ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. 2017ರಲ್ಲಿ ರಾಂಪುರ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದ ಅಜಂ ಖಾನ್, 2019ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಜಯ ಸಾಧಿಸಿದ್ದರು. ಇದರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಸದರಾಗಿ ಮುಂದುವರೆದಿದ್ದರು. ಆದರೆ, 2022ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅದೇ ರಾಂಪುರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆಗ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ, ಶಾಸಕರಾಗಿಯೇ ಮುಂದುವರೆದಿದ್ದರು.

ಇದನ್ನೂ ಓದಿ:ದ್ವೇಷ ಭಾಷಣಕ್ಕೆ ಜೈಲು ಶಿಕ್ಷೆ ಎಫೆಕ್ಟ್‌: ಶಾಸಕ ಸ್ಥಾನದಿಂದ ಅಜಂ ಖಾನ್​ ಅನರ್ಹ

ABOUT THE AUTHOR

...view details