ಮಾಧೇಪುರ(ಬಿಹಾರ):ಕೋವಿಡ್ ಮಹಾಮಾರಿಗೆ ಎರಡು ಡೋಸ್ ಕೊರೊನಾ ವ್ಯಾಕ್ಸಿನ್ ನೀಡಲಾಗ್ತಿದೆ. 15 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಚುಚ್ಚುಮದ್ದು ಪಡೆದುಕೊಳ್ಳುವುದು ಒಳಿತು.
ಆದರೆ, ಬಿಹಾರದಲ್ಲಿ ವಾಸವಾಗಿರುವ 84 ವರ್ಷದ ವೃದ್ಧರೊಬ್ಬರು 11 ಸಲ ವ್ಯಾಕ್ಸಿನ್ ಪಡೆದುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.
ಬಿಹಾರದ ಮಾಧೇಪುರ ಜಿಲ್ಲೆಯ ಉದಕಿಶುಂಗಂಜ್ನ ಓರೈ ಗ್ರಾಮದಲ್ಲಿ ವಾಸವಾಗಿರುವ ಬ್ರಹ್ಮದೇವ್ ಮಂಡಲ್ 11 ಸಲ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ. ಇದರಿಂದ ತಮಗೆ ಸಾಕಷ್ಟು ಲಾಭವಾಗಿದೆ ಎಂದು ಹೇಳುವ ಅವರು, ಇದೇ ಕಾರಣಕ್ಕಾಗಿ ಇಷ್ಟೊಂದು ಸಲ ವ್ಯಾಕ್ಸಿನ್ ಪಡೆದುಕೊಂಡೆ ಎನ್ನುತ್ತಾರೆ.
ಬ್ರಹ್ಮದೇವ್ ಅವರು ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ಸದ್ಯ ಓರೈ ಗ್ರಾಮದಲ್ಲಿ ವಾಸವಿದ್ದಾರೆ. ಕಳೆದ ಫೆಬ್ರವರಿ 13ರಂದು ಮೊದಲ ಡೋಸ್ ವ್ಯಾಕ್ಸಿನ್ ಪಡೆದುಕೊಂಡಿರುವ ಇವರು ತದನಂತರ ಡಿಸೆಂಬರ್ 30ರವರೆಗೆ ಬೇರೆ ಬೇರೆ ಸ್ಥಳಗಳಲ್ಲಿ ಒಟ್ಟು 11 ಸಲ ವ್ಯಾಕ್ಸಿನ್ ಡೋಸ್ ಪಡೆದುಕೊಂಡಿದ್ದಾರೆ. ಪ್ರತಿ ಸಲ ವ್ಯಾಕ್ಸಿನ್ ಪಡೆದುಕೊಂಡಿರುವ ದಿನಾಂಕವನ್ನು ಕಾಗದದಲ್ಲಿ ಬರೆದಿಟ್ಟಿದ್ದಾರೆ. ವಿಶೇಷವೆಂದರೆ, 12ನೇ ಸಲ ವ್ಯಾಕ್ಸಿನ್ ಪಡೆದುಕೊಳ್ಳಲು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಜಾರ್ಖಂಡ್ ಬಿಜೆಪಿ ಮಾಜಿ ಶಾಸಕನ ಮೇಲೆ ನಕ್ಸಲ್ ದಾಳಿ: ಇಬ್ಬರು ಅಂಗರಕ್ಷಕರ ಹತ್ಯೆ