ಕೊರ್ಬಾ (ಛತ್ತೀಸ್ಗಢ): ಛತ್ತೀಸ್ಗಢದಲ್ಲಿ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. 20 ವರ್ಷದ ಯುವತಿಯನ್ನು ವ್ಯಕ್ತಿಯೋರ್ವ ಸ್ಕ್ರೂಡ್ರೈವರ್ನಿಂದ 51 ಬಾರಿ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಕೊರ್ಬಾ ಜಿಲ್ಲೆಯಲ್ಲಿ ನಡೆದ ಪ್ರಕರಣವಿದು!.
ಇಲ್ಲಿನ ಎಸ್ಇಸಿಎಲ್ (ಸೌತ್ ಈಸ್ಟರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್) ಪಂಪ್ ಹೌಸ್ ಕಾಲೋನಿಯಲ್ಲಿ ಡಿ.24ರಂದು ಹತ್ಯೆ ನಡೆದಿದೆ. ಯುವತಿ ತನ್ನ ಮನೆಯಲ್ಲಿ ಒಬ್ಬಳೇ ಇದ್ದಾಗ ಆರೋಪಿ ಬಂದು ದಾಳಿ ಮಾಡಿದ್ದಾನೆ. ಮೊದಲಿಗೆ ತಲೆದಿ೦ಬಿನಿಂದ ಆಕೆ ಬಾಯಿ ಮುಚ್ಚಿ ನಂತರ ಸ್ಕ್ರೂಡ್ರೈವರ್ನಿಂದ ಇರಿದಿದ್ದಾನೆ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ (ಸಿಎಸ್ಪಿ) ವಿಶ್ವದೀಪಕ್ ತ್ರಿಪಾಠಿ ತಿಳಿಸಿದ್ದಾರೆ.
ಮಾತು ಬಿಟ್ಟಿದ್ದಕ್ಕೆ ಹತ್ಯೆ:ಆರೋಪಿಯು ಜಶ್ಪುರ ಜಿಲ್ಲೆಯ ಮೂಲದವನಾಗಿದ್ದು, ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ. ವಿದ್ಯಾಭ್ಯಾಸ ಮಾಡುತ್ತಿದ್ದ ಯುವತಿ ಇದೇ ಬಸ್ನಲ್ಲಿ ಪ್ರಯಾಣಿಸುತ್ತಿದ್ದಳು. ಇದರಿಂದಾಗಿ ಕಳೆದ ಮೂರು ವರ್ಷಗಳಿಂದ ಇಬ್ಬರ ನಡುವೆ ಸ್ನೇಹ ಇತ್ತು. ನಂತರ ತನ್ನ ಕೆಲಸ ನಿಮಿತ್ತ ಆರೋಪಿ ಗುಜರಾತ್ನ ಅಹಮದಾಬಾದ್ಗೆ ತೆರಳಿ ಅಲ್ಲೇ ನೆಲೆಸಿದ್ದ. ಆದರೂ, ಇಬ್ಬರೂ ನಿರಂತರವಾಗಿ ಫೋನ್ನಲ್ಲಿ ಸಂಪರ್ಕದಲ್ಲಿದ್ದರು. ಆದರೆ, ಈ ನಡುವೆ ಆಕೆಯ ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದಳು ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ತ್ರಿಪಾಠಿ ಮಾಹಿತಿ ನೀಡಿದರು.