ಮುಂಬೈ (ಮಹಾರಾಷ್ಟ್ರ):ವಿಮಾನಗಳಲ್ಲಿ ಪ್ರಯಾಣಿಕರ ದುಂಡಾವರ್ತನೆ ಪ್ರಕರಣಗಳು ನಿಂತಿಲ್ಲ. ಕೆಲ ದಿನಗಳ ಹಿಂದೆ ವ್ಯಕ್ತಿಯೊಬ್ಬ ಮದ್ಯಪಾನ ಮಾಡಿ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಇದೀಗ ಏರ್ ಇಂಡಿಯಾ ವಿಮಾನದಲ್ಲಿ ಭಾರತೀಯ ಮೂಲದ ಅಮೆರಿಕದ ಪ್ರಜೆ ಶೌಚಾಲಯದಲ್ಲಿ ಧೂಮಪಾನ ಮಾಡಿದ್ದಲ್ಲದೇ, ಸಹ ಪ್ರಯಾಣಿಕರ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ಆತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ನಿನ್ನೆ ಈ ಘಟನೆ ನಡೆದಿದೆ. ಏರ್ ಇಂಡಿಯಾದ ಲಂಡನ್- ಮುಂಬೈ ವಿಮಾನದ ಶೌಚಾಲಯದಲ್ಲಿ ಭಾರತೀಯ ಮೂಲದ ಅಮೆರಿಕನ್ ಪ್ರಜೆಯಾದ ರಮಾಕಾಂತ್(37) ಎಂಬಾತ ನಿಷೇಧದ ಮಧ್ಯೆ ಶೌಚಾಲಯದಲ್ಲಿ ಧೂಮಪಾನ ಮಾಡಿದ್ದಾನೆ. ಆಗ ಅಲಾರಾಂ ರಿಂಗಣಿಸಿದೆ. ತಕ್ಷಣವೇ ವಿಮಾನ ಸಿಬ್ಬಂದಿ ಆತನನ್ನು ಅಲ್ಲಿಂದ ಹೊರಬರಲು ಸೂಚಿಸಿದ್ದಾರೆ. ರಮಾಕಾಂತ್ ಕೈಯಲ್ಲಿ ಸಿಗರೇಟ್ ಇರುವುದನ್ನು ಕಂಡು, ಅದನ್ನು ಕಸಿದುಕೊಂಡಿದ್ದಾರೆ.
ಬಳಿಕ ಆತನಿಗೆ ಎಚ್ಚರಿಕೆ ನೀಡಿ ಸೀಟಿನಲ್ಲಿ ಕೂರಿಸಿದ್ದಾರೆ. ಸ್ವಲ್ಪ ಸಮಯದ ನಂತರ ಆ ವ್ಯಕ್ತಿ ವಿಮಾನದ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾನೆ. ಈ ವರ್ತನೆಯಿಂದ ಪ್ರಯಾಣಿಕರು ಭಯಗೊಂಡರು. ಅಲ್ಲದೇ, ಜೋರಾಗಿ ಕಿರುಚಾಡಲೂ ಆರಂಭಿಸಿದ್ದಾನೆ. ವಿಮಾನದಲ್ಲಿ ಈತನ ಗಿಮಿಕ್ನಿಂದಾಗಿ ಭೀತಿಗೊಳಗಾದ ವಿಮಾನ ಸಿಬ್ಬಂದಿ ಆತನ ಕೈ- ಕಾಲುಗಳನ್ನು ಕಟ್ಟಿ ಸೀಟಿಗೆ ತಂದು ಕೂರಿಸಿದ್ದಾರೆ.
ಇಷ್ಟಾದರೂ ಬಿಡದ ಆತ, ಸಹ ಪ್ರಯಾಣಿಕರ ಮೇಲೆ ತಲೆಯಿಂದ ಗುದ್ದಲು ಶುರು ಮಾಡಿದ್ದಾನೆ. ವಿಮಾನದಲ್ಲಿ ವೈದ್ಯರೊಬ್ಬರು ಆತನನ್ನು ಪರೀಕ್ಷಿಸಿದರು. ರಮಾಕಾಂತ್ ಅವರ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ ಕೆಲವು ಔಷಧಿಗಳು ಪತ್ತೆಯಾಗಿವೆ. ಅಲ್ಲದೇ, ಬ್ಯಾಗ್ನಲ್ಲಿ ಇ-ಸಿಗರೇಟ್ ಇರುವುದು ಪತ್ತೆಯಾಗಿತ್ತು ಎಂದು ಏರ್ ಇಂಡಿಯಾದ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದಾರೆ.