ಮಂದಸೌರ್(ಮಧ್ಯಪ್ರದೇಶ):ವಿವಾಹ ಸಮಾರಂಭವೊಂದರಲ್ಲಿ ಗುಂಡು ಹಾರಿಸಿ, ಓರ್ವ ವ್ಯಕ್ತಿಯ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಮಂದಸೌರ್ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳ ಬಂಧನ ಮಾಡಲಾಗಿದ್ದು, 15 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಕೊಲೆ ಆರೋಪದ ಮೇಲೆ ಜೀವಾವಧಿ ಶಿಕ್ಷೆಗೊಳಗಾಗಿ ಜೈಲಿನಲ್ಲಿರುವ ಸ್ವಯಂ ಘೋಷಿತ ದೇವ ಮಾನವ ರಾಮ್ಪಾಲ್ ಅವರ ಪ್ರವಚನದ ವಿಡಿಯೋ ಪರದೆ ಮೇಲೆ ಬಿತ್ತರಗೊಳ್ಳುತ್ತಿದ್ದಂತೆ ಮದುವೆ ಸಮಾರಂಭದಲ್ಲಿ ವಾಗ್ವಾದ ಉಂಟಾಗಿದೆ. ಈ ವೇಳೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಂದಸೌರ್ನ ಭೈಂಸೋಡಾ ಮಂಡಿ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 15 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಅದರಲ್ಲಿ ಮೂವರ ಬಂಧನ ಮಾಡಲಾಗಿದೆ.
ಇದನ್ನೂ ಓದಿರಿ:ದೇವೇಗೌಡರ ಜೀವನಾಧಾರಿತ ಕೃತಿ ಬಿಡುಗಡೆ... ಭಾಷಣದ ವೇಳೆ ಭಾವುಕರಾದ ಫಾರೂಕ್ ಅಬ್ದುಲ್ಲಾ
ಗುಂಡಿನ ದಾಳಿಯಲ್ಲಿ ಮೃತಪಟ್ಟಿರುವ ವ್ಯಕ್ತಿಯನ್ನ ಮಾಜಿ ಸರಪಂಚ್ ದೇವಿಲಾಲ್ ಮೀನಾ ಎಂದು ಹೇಳಲಾಗಿದೆ. ಬಂಧಿತರನ್ನ ಕಮಲ್ ಪಾಟಿದಾರ್,ಲಲಿತ್ ಸುತಾರ್ ಮತ್ತು ಮಂಗಲ್ ಎಂದು ಗುರುತಿಸಲಾಗಿದೆ. ಪೊಲೀಸ್ ಅಧೀಕ್ಷಕ ಸುನಿಲ್ ಕುಮಾರ್ ಪಾಂಡೆ ತಿಳಿಸಿರುವ ಪ್ರಕಾರ, ಮದುವೆ ಸಮಾರಂಭದಲ್ಲಿ 200 ಜನರು ಭಾಗಿಯಾಗಿದ್ದರು. ಈ ವೇಳೆ ರಾಮ್ಪಾಲ್ ಅವರ ಪ್ರವಚನ ಬಿತ್ತರಿಸಲಾಗಿದ್ದು, ಇದಕ್ಕೆ ಗ್ರಾಮದ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.ಇದೇ ಕಾರಣಕ್ಕಾಗಿ ವಾಗ್ವಾದ ಉಂಟಾಗಿ ಗುಂಡಿನ ದಾಳಿ ನಡೆದಿದೆ ಎಂದಿದ್ದಾರೆ.