ಎರ್ನಾಕುಲಂ(ಕೇರಳ):ಸ್ನೇಹಿತರೊಂದಿಗೆ ಮಾತನಾಡುತ್ತಿದ್ದ ಯುವತಿಯನ್ನು ಪಕ್ಕದ ರೂಂಗೆ ಎಳೆದೊಯ್ದು ಗುಂಡಿಕ್ಕಿ ಕೊಲೆ ಮಾಡಿದ ಯುವಕ, ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋತಮಂಗಲದ ನೆಲ್ಲಿಕುಳಿಯಲ್ಲಿ ನಡೆದಿದೆ.
ಏನಿದು ಪ್ರಕರಣ:ಇಂದಿರಾ ಗಾಂಧಿ ಡೆಂಟಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ಮಾನಸಾ (24) ವ್ಯಾಸಂಗ ಮಾಡುತ್ತಿದ್ದರು. ಮಾನಸ ಕಣ್ಣೂರಿನ ಎರಡನೇ ಮೈಲ್ ನಿವಾಸಿ. ಯುವಕ ರಾಹಿಲ್ ಸಹ ಕಣ್ಣೂರಿನ ನಿವಾಸಿ. ರಾಹಿಲ್ ಮತ್ತು ಮಾನಸಾಗೆ ಈ ಹಿಂದೆ ಪರಿಚಯವಿತ್ತು.
ಲವ್ ಪ್ರಪೋಸ್: ಇಬ್ಬರ ಮಧ್ಯೆ ಸ್ನೇಹ ಇದ್ದ ಕಾರಣ ರಾಹಿಲ್ ಮಾನಸಾಳಿಗೆ ತನ್ನ ಪ್ರೇಮದ ವಿಷಯವನ್ನು ಪ್ರಸ್ತಾಪ ಮಾಡಿದ್ದರು. ಇದಕ್ಕೆ ಮಾನಸಾ ನಿರಾಕರಿಸಿದ್ದಾಳೆ. ಈ ವಿಷಯದ ಸಂಬಂಧ ಇಬ್ಬರಲ್ಲಿ ಬಿರುಕು ಮೂಡಿದೆ. ಆದ್ರೂ ಸಹ ರಾಹಿಲ್ ತನ್ನನ್ನು ಪ್ರೀತಿಸುವಂತೆ ಮಾನಸಾಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಮಾನಸಾ ರಾಹಿಲ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಳು. ನಂತರ ಈ ವಿಷಯವನ್ನು ಸೌಹಾರ್ದಯುತವಾಗಿ ಬಗೆಹರಿಸಲಾಗಿತ್ತು.
ಕೊಲೆ...ಶುಕ್ರವಾರ ಏಕಾಏಕಿ ಡೆಂಟಲ್ ಕಾಲೇಜಿನ ಬಳಿ ಮಾನಸಾ ವಾಸಿಸುತ್ತಿದ್ದ ಬಾಡಿಗೆ ಮನೆಗೆ ರಾಹಿಲ್ ನುಗ್ಗಿದ್ದಾನೆ. ತನ್ನ ಸ್ನೇಹಿತರೊಂದಿಗೆ ನಿವಾಸದಲ್ಲಿ ಮಾತನಾಡುತ್ತಿದ್ದ ಮಾನಸಾಳನ್ನು ಪಕ್ಕದ ಕೋಣೆಗೆ ಎಳೆದೊಯ್ದು ಗುಂಡಿಕ್ಕಿ ಕೊಂದಿದ್ದಾನೆ. ಸ್ವಲ್ಪ ಸಮಯದ ನಂತರ ರಾಹಿಲ್ ಕೂಡ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಇಬ್ಬರ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಈ ಘಟನೆ ಕುರಿತು ಪೊಲೀಸ್ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.