ನವದೆಹಲಿ:ಪೂರ್ವ ದೆಹಲಿಯ ಮುನ್ಸಿಪಲ್ ಶಾಲೆಗೆ ನುಗ್ಗಿದ ವ್ಯಕ್ತಿಯೊಬ್ಬ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ, ಅವರ ಮುಂದೆಯೇ ಮೂತ್ರ ವಿಸರ್ಜನೆ ಮಾಡಿದ ವಿಲಕ್ಷಣ ಘಟನೆ ನಡೆದಿದೆ. ಇದರ ವಿರುದ್ಧ ಮಹಿಳಾ ಆಯೋಗ ಆಘಾತ ವ್ಯಕ್ತಪಡಿಸಿದ್ದಲ್ಲದೇ, ವಿಚಾರಣೆಗೆ ಸೂಚಿಸಿದೆ.
ತರಗತಿಗೆ ನುಗ್ಗಿದ ವ್ಯಕ್ತಿಯೊಬ್ಬ ಬಾಲಕಿಯರಿಗೆ ಕಿರುಕುಳ ನೀಡುವುದರ ಜೊತೆಗೆ ಅವರ ಮುಂದೆಯೇ ಮೂತ್ರ ವಿಸರ್ಜನೆ ಮಾಡಿದ್ದಾನೆ. ಇದು ಅಕ್ಷಮ್ಯ. ಆ ವ್ಯಕ್ತಿಯ ವರ್ತನೆಯ ಬಗ್ಗೆ ವಿದ್ಯಾರ್ಥಿನಿಯರು ಶಿಕ್ಷಕರು ಮತ್ತು ಸಿಬ್ಬಂದಿಗೆ ಮಾಹಿತಿ ನೀಡಿದಾಗ್ಯೂ ಅವರು ಸುಮ್ಮನಿರಲು ಹೇಳಿದ್ದು ಆಕ್ಷೇಪಾರ್ಹ ಎಂದು ಆಯೋಗ ಬೇಸರಿಸಿದೆ.
ಘಟನೆ ಸಂಬಂಧ ಆಯೋಗ ಪೊಲೀಸರು ಪೂರ್ವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ಗೆ ನೋಟಿಸ್ ನೀಡಿದೆ. ಆರೋಪಿಯನ್ನು ಪತ್ತೆ ಹಚ್ಚಿ ಅವನ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಅಲ್ಲದೇ, ಶಾಲಾ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆಯೂ ಸಲಹೆ ನೀಡಲಾಗಿದೆ.
ದೆಹಲಿಯ ಭಜನಪುರದ ಐದನೇ ತರಗತಿವರೆಗೆ ಕಾರ್ಯನಿರ್ವಹಿಸುತ್ತಿರುವ ಮುನ್ಸಿಪಲ್ ಕಾರ್ಪೋರೇಷನ್ ಶಾಲೆಯಲ್ಲಿ ನಡೆದಿರುವ ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ನೀಡಿರುವ ವಿವರಗಳ ಪ್ರಕಾರ ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಆಶ್ಚರ್ಯವಾದ್ರೂ ಇದು ನಿಜ.. ಈ ಶಾಲೆಯ ಪ್ರತಿ ವಿದ್ಯಾರ್ಥಿ 'ಕೈ ಬರಹ' ಒಂದೇ ರೀತಿ!