ಕುರ್ಸಿಯಾಂಗ್ (ಪಶ್ಚಿಮ ಬಂಗಾಳ):ತನ್ನ ಮಗಳ ಮೇಲೆಯೇ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನಿಗೆ ಬುಧವಾರ ಕುರ್ಸಿಯಾಂಗ್ ಹೆಚ್ಚುವರಿ ಸೆಷನ್ಸ್ ಮತ್ತು ವಿಶೇಷ ನ್ಯಾಯಾಲಯವು 25 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಪಬ್ಲಿಕ್ ಪ್ರಾಸಿಕ್ಯೂಟರ್ ರಮೇಶ್ ಅಗರ್ವಾಲ್ ಪ್ರಕಾರ, 2017ರ ಡಿಸೆಂಬರ್ನಲ್ಲಿ 15 ವರ್ಷದ ಅಪ್ರಾಪ್ತ ವಯಸ್ಕ ತನ್ನ 35 ವರ್ಷದ ತಂದೆ ತಮ್ಮ ಮನೆಯಲ್ಲಿ ಲೈಂಗಿಕ ದೌರ್ಜನ್ಯ ನಡೆಸಿ, ದೈಹಿಕ ಕಿರುಕುಳ ನೀಡಿದ್ದಾರೆ ಎಂದು 2018ರ ಜನವರಿ 9 ರಂದು ಕುರ್ಸಿಯಾಂಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಪೋಕ್ಸೊ ಕಾಯ್ದೆಯಡಿ ದೂರು:ತನ್ನ ತಂದೆಯಿಂದ ಪ್ರತಿದಿನವೂ ಹಲವಾರು ರೀತಿಯಲ್ಲಿ ನಿಂದನೆಗೆ ಒಳಗಾಗಿದ್ದ ಅಪ್ರಾಪ್ತ ಮಗಳು, ತನ್ನ ಮಲತಾಯಿಯ ಬಳಿ ತನಗಾದ ಸಂಕಟವನ್ನು ವಿವರಿಸಿದ್ದಳು. ತನ್ನ ತಂದೆಯಿಂದ ದೈಹಿಕ ಕಿರುಕುಳ ಸೇರಿದಂತೆ ಲೈಂಗಿಕ ಕಿರುಕುಳದ ಬಗ್ಗೆ 2018ರ ಜನವರಿ 9 ರಂದು ಕುರ್ಸಿಯಾಂಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಆರೋಪಿ ತಂದೆಯನ್ನು ಬಾಲಕಿಯ ಅತ್ಯಾಚಾರದ ಆರೋಪದ ಆಧಾರದ ಮೇಲೆ ಬಂಧಿಸಲಾಗಿತ್ತು. ಪೋಕ್ಸೊ ಕಾಯ್ದೆಯ ಸೆಕ್ಷನ್ 6ರ ಅಡಿ ಕುರ್ಸಿಯಾಂಗ್ ವಿಶೇಷ ನ್ಯಾಯಾಲಯದಲ್ಲಿ (ಪೋಕ್ಸೊ) ಪ್ರಕರಣದ ವಿಚಾರಣೆ ನಡೆಸಲಾಗಿದೆ.
ಇದನ್ನೂ ಓದಿ:ಅಪ್ರಾಪ್ತೆಗೆ ಲೈಂಗಿಕ ಕಿರುಕುಳ: ಅಪರಾಧಿಗೆ ಮೂರು ವರ್ಷ ಜೈಲು ಶಿಕ್ಷೆ
25 ವರ್ಷಗಳ ಕಠಿಣ ಜೈಲು ಶಿಕ್ಷೆ, 50,000 ರೂ. ದಂಡ:ಸುಮಾರು ಐದು ವರ್ಷಗಳ ನಂತರ, ಸಂತ್ರಸ್ತೆಯ ವೈದ್ಯಕೀಯ ವರದಿ ಮತ್ತು ಸಂಬಂಧಿಕರ ಹೇಳಿಕೆಗಳು ಮತ್ತು ಇತರ ಮಾಹಿತಿಯ ಆಧಾರದ ಮೇಲೆ, ಕುರ್ಸಿಯಾಂಗ್ ಹೆಚ್ಚುವರಿ ಸೆಷನ್ಸ್ ಮತ್ತು ವಿಶೇಷ ನ್ಯಾಯಾಲಯವು ಬುಧವಾರ ಪೋಕ್ಸೊ ಕಾಯ್ದೆಯ ಸೆಕ್ಷನ್ 6ರ ಅಡಿ ಆರೋಪಿಗೆ ಶಿಕ್ಷೆ ವಿಧಿಸಿದೆ. ಈ ವ್ಯಕ್ತಿಗೆ ಪೋಕ್ಸೊ ಕಾಯ್ದೆಯಡಿ 25 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 50,000 ರೂ ದಂಡ ವಿಧಿಸಲಾಗಿದೆ ಎಂದು ವಿಶೇಷ ಪಿಪಿ ರಮೇಶ್ ಅಗರ್ವಾಲ್ ತಿಳಿಸಿದ್ದಾರೆ. ಆರೋಪಿ ತಂದೆಗೆ ಮೂವರು ಪತ್ನಿಯರಿದ್ದಾರೆ ಎಂದೂ ಅವರು ಹೇಳಿದ್ದಾರೆ.