ಚಂಡೀಗಢ:ಭಾರತದ ಹಲವಾರು ರಾಜ್ಯಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ನದಿ ಕೆರೆಗಳು ಉಕ್ಕಿ ಪ್ರವಾಹಗಳು ಉಂಟಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಯ ತೀವ್ರತೆಯ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದೀಗ ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಂಡೀಗಢದಲ್ಲಿ ನೀರಿನ ನಡುವೆ ಸಿಲುಕಿಕೊಂಡಿದ್ದ ನಾಯಿ ಮರಿಯೊಂದನ್ನು ಅಗ್ನಿಶಾಮಕ ಸಿಬ್ಬಂದಿಯೊಬ್ಬರು ತಮ್ಮ ಪ್ರಾಣ ಪಣಕ್ಕಿಟ್ಟು ರಕ್ಷಣೆ ಮಾಡಿದ್ದಾರೆ.
ಇಲ್ಲಿಯ ಖುದಾ ಲಾಹೋರ್ ಎಂಬ ಸೇತುವೆಯ ಕೆಳಗೆ ಸಿಲುಕಿದ್ದ ನಾಯಿ ನೀರಿನ ಹರಿವಿನಿಂದ ಹೊರಬರಲು ಆಗದೇ ಪರದಾಡಿದೆ. ಇದನ್ನು ಕಂಡ ಅಗ್ನಿಶಾಮಕ ಇಲಾಖೆ ಸಿಬ್ಬಂದಿಯೊಬ್ಬರು ಜೀವದ ಹಂಗು ತೊರೆದು ಅದರ ರಕ್ಷಣೆಗೆ ಮುಂದಾಗಿದ್ದಾರೆ. ಏಣಿಯ ಸಹಾಯದಿಂದ ಸೇತುವೆ ಕೆಳಗೆ ಇಳಿದು ನಾಯಿಯನ್ನು ಸುರಕ್ಷಿತವಾಗಿ ಮೇಲೆ ತಂದು ಜೀವ ಉಳಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರು ಅಗ್ನಿಶಾಮಕ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಡಿಯೋವನ್ನು ಚಂಡೀಗಢ ಪೊಲೀಸ್ ಇಲಾಖೆ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, "ಚಂಡೀಗಢ ಪೊಲೀಸ್ ಇಲಾಖೆಗೆ ಸಹಾಯ ಮಾಡಿದ ಅಗ್ನಿಶಾಮಕ ಇಲಾಖೆಯ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತದೆ. ನೀರಿನ ಹರಿವಿನಿಂದ ಖುದಾ ಲಾಹೋರ್ ಸೇತುವೆಯ ಅಡಿಯಲ್ಲಿ ಸಿಲುಕಿಕೊಂಡಿದ್ದ ನಾಯಿಮರಿಯನ್ನು ರಕ್ಷಿಸಲಾಗಿದೆ" ಎಂದು ಬರೆದು ಪೋಸ್ಟ್ ಹಂಚಿಕೊಂಡಿದ್ದಾರೆ. ಇಲಾಖೆಯು ತಮ್ಮ ಟ್ವೀಟ್‌ನಲ್ಲಿ ಕೆಲವು ಹ್ಯಾಶ್‌ಟ್ಯಾಗ್‌ಗಳನ್ನು ಕೂಡ ಸೇರಿಸಿದೆ. ಜುಲೈ 10 ರಂದು ಪೋಸ್ಟ್ ಮಾಡಲಾದ ಈ ವಿಡಿಯೋ ಟ್ವಿಟರ್‌ನಲ್ಲಿ ಸುಮಾರು 98,000 ವೀಕ್ಷಣೆಗಳನ್ನು ಪಡೆದಿದೆ.