ಈ ವ್ಯಕ್ತಿ ಬೈಕನ್ನು ಕತ್ತೆ ಎಂದೇ ಭಾವಿಸಿದ್ದಾನೆ. ಕಾರಣ, ಇಬ್ಬರು ಕುಳಿತು ಹೋಗಬಹುದಾದ ಬೈಕ್ನಲ್ಲಿ 10 ಜನರು ಹೊರುವಷ್ಟು ವಸ್ತುಗಳನ್ನು ಸಾಗಿಸಿದ್ದು ಕಂಡುಬಂದಿದೆ. ಈ ಆತಂಕಕಾರಿ ರೈಡಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೆಲಂಗಾಣ ಪೊಲೀಸರೂ ಕೂಡ ಇದನ್ನು ಟ್ವೀಟ್ ಮಾಡಿ ಎಚ್ಚರಿಸಿದ್ದಾರೆ.
ವೈರಲ್ ಆದ ವಿಡಿಯೋದಲ್ಲಿರುವಂತೆ, ವ್ಯಕ್ತಿಯೋರ್ವ ತನ್ನ ಸ್ಕೂಟರ್ ತುಂಬಾ ವಸ್ತುಗಳನ್ನು ಹೇರಿಕೊಂಡು ಹ್ಯಾಂಡಲ್ ಅನ್ನು ಹರಸಾಹಸಪಟ್ಟು ಹಿಡಿದು ಚಲಾಯಿಸುತ್ತಿದ್ದಾನೆ. ಹೆಲ್ಮೆಟ್ ಧರಿಸಿರುವ ಈತ ಸೀಟಿನ ಕೊನೆಯ ಅಂಚಿನಲ್ಲಿ ಕೂತು ವಸ್ತುಗಳ ಮೇಲೆ ಒರಗಿ ಬಿದ್ದು ಅಪಾಯಕಾರಿಯಾಗಿ ಬೈಕ್ ರೈಡ್ ಮಾಡಿಕೊಂಡು ಹೋಗಿದ್ದಾನೆ.
ಸಾಗರ್ ಎಂಬ ಬಳಕೆದಾರರು ಟ್ವೀಟ್ ಮಾಡಿ '32 ಜಿಬಿ ಫೋನ್ 31.9 ರಷ್ಟು ಸ್ಥಾನ ತುಂಬಿಕೊಂಡಿದೆ' ಎಂದು ವ್ಯಂಗ್ಯವಾಗಿ ಬರೆದುಕೊಂಡು ವಿಡಿಯೋ ಶೇರ್ ಮಾಡಿದ್ದಾರೆ. ಇದಕ್ಕೆ ನಾನಾ ಬಳಕೆದಾರರು ತರಹೇವಾರಿ ಕಾಮೆಂಟ್ ಮಾಡಿದ್ದು, 'ಹೆಲ್ಮೆಟ್ ಧರಿಸಿ ನಿಯಮಗಳನ್ನು ಅನುಸರಿಸುವ ಒಳ್ಳೆಯ ವ್ಯಕ್ತಿ ಈತ' ಎಂದು ಒಬ್ಬರು ನಗೆ ಚಟಾಕಿ ಹಾರಿಸಿದ್ದರೆ, ಮತ್ತೊಬ್ಬರು 'ಈತನಿಗೆ ದೊಡ್ಡ ದಂಡವನ್ನು ವಿಧಿಸಿ. ಆಗ ಮಾತ್ರ ಈ ಹುಚ್ಚು ಸಾಹಸ ಮಾಡಲಾರ. ಸಾಯುವವರೆಗೂ ಇದನ್ನು ಮರೆಯುವುದಿಲ್ಲ. ಕಾನೂನನ್ನು ಲಘುವಾಗಿ ತೆಗೆದುಕೊಂಡಿದ್ದಾರೆ' ಎಂದು ಟೀಕಿಸಿದ್ದಾರೆ.
ತೆಲಂಗಾಣ ಪೊಲೀಸರು ಟ್ವೀಟ್ ಮಾಡಿ, 'ತುಂಬಿಕೊಂಡ ಮೊಬೈಲ್ನ ಜಾಗವನ್ನು ಮರು ಸಂಪಾದಿಸಬಹುದು, ಆದರೆ, ಪ್ರಾಣ ಹೋದಲ್ಲಿ ವಾಪಸ್ ಬರುವುದಿಲ್ಲ. ಹೀಗಾಗಿ ಜೀವ ಒತ್ತೆ ಇಟ್ಟು ಇಂತಹ ಸಾಹಸ ಮಾಡಬೇಡಿ. ಇದು ಇನ್ನೊಬ್ಬರ ಜೀವಕ್ಕೂ ಅಪಾಯಕಾರಿ' ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ:ಜಮ್ಮು ಕಾಶ್ಮೀರದಲ್ಲಿ 11 ಪ್ರವಾಸಿಗರು, ಇಬ್ಬರು ಮಾರ್ಗದರ್ಶಿಗಳು ನಾಪತ್ತೆ