ಕರ್ನಾಟಕ

karnataka

ETV Bharat / bharat

ಎಕ್ಸಾಮ್ ಪಾಸ್ ಮಾಡಲು ಚರ್ಮ ಕಿತ್ತು ಮತ್ತೊಬ್ಬನ ಬೆರಳಿಗೆ ಅಂಟಿಸಿದ.. ಸ್ಯಾನಿಟೈಜರ್​ನಿಂದ ಸಿಕ್ಕು ಬಿದ್ದ - ರೈಲ್ವೆ ನೇಮಕಾತಿ ಪರೀಕ್ಷೆ

ರೈಲ್ವೆ ನೇಮಕಾತಿ ಪರೀಕ್ಷೆ ಬರೆಯಲು ಗೆಳೆಯನನ್ನು ಕಳುಹಿಸಿದ ಅಭ್ಯರ್ಥಿ. ಹೆಬ್ಬೆರಳಿನ ಚರ್ಮ ಕಿತ್ತು ಮತ್ತೊಬ್ಬನ ಬೆರಳಿಗೆ ಅಂಟಿಸಿ ಬಯೋಮೆಟ್ರಿಕ್ ದಾಟಿಸಲು ವಿಫಲ ಯತ್ನ. ಆರೋಪಿಗಳಿಬ್ಬರ ಬಂಧನ.

to-pass-the-exam-he-cut-off-the-skin-and-pasted-it-on-anothers-finger
ಎಕ್ಸಾಮ್ ಪಾಸ್ ಮಾಡಲು ಚರ್ಮ ಕಿತ್ತು ಮತ್ತೊಬ್ಬನ ಬೆರಳಿಗೆ ಅಂಟಿಸಿದ.. ಸ್ಯಾನಿಟೈಜರ್​ನಿಂದ ಸಿಕ್ಕು ಬಿದ್ದ

By

Published : Aug 25, 2022, 6:58 PM IST

ವಡೊದರಾ: ರೈಲ್ವೆ ಇಲಾಖೆಯಲ್ಲಿ ಹೇಗಾದರೂ ಮಾಡಿ ಕೆಲಸ ಗಿಟ್ಟಿಸಲೇಬೇಕೆಂಬ ಉದ್ದೇಶದಿಂದ ವ್ಯಕ್ತಿಯೊಬ್ಬ ತನ್ನ ಹೆಬ್ಬೆರಳಿನ ಚರ್ಮವನ್ನು ಕಿತ್ತು ಗೆಳೆಯನ ಹೆಬ್ಬೆರಳಿಗೆ ಅಂಟಿಸಿದ ಘಟನೆ ಇಲ್ಲಿ ನಡೆದಿದೆ. ತನ್ನ ಬದಲಿಗೆ ಗೆಳೆಯ ಬಯೋಮೆಟ್ರಿಕ್ ವೆರಿಫಿಕೇಶನ್ ದಾಟಿ ರೈಲ್ವೆ ನೇಮಕಾತಿ ಪರೀಕ್ಷೆ ಬರೆಯಲಿ ಎಂಬ ಉದ್ದೇಶದಿಂದ ಆತ ಇಂಥದೊಂದು ಅದ್ಭುತ ಐಡಿಯಾ ಮಾಡಿದ್ದಾನೆ. ಬಿಸಿಯಾದ ಪ್ಯಾನ್​ನಿಂದ ಚರ್ಮ ಕಿತ್ತು ಗೆಳೆಯನಿಗೆ ಆತ ಅಂಟಿಸಿದ್ದಾನೆ.

ಆದರೆ ಈ ಘಟನೆ ಮುಂದೆ ವಿಚಿತ್ರ ತಿರುವು ತೆಗೆದುಕೊಂಡಿದೆ. ಗುಜರಾತ್​ನ ವಡೋದರಾದಲ್ಲಿ ಆಗಸ್ಟ್ 22 ರಂದು ನೇಮಕಾತಿ ಪರೀಕ್ಷೆ ನಡೆದಿತ್ತು. ಈ ಸಂದರ್ಭದಲ್ಲಿ ಅಭ್ಯರ್ಥಿಯ ಗೆಳೆಯ ತಾನೇ ಅಭ್ಯರ್ಥಿ ಎಂದು ಅಲ್ಲಿಗೆ ಹೋಗಿದ್ದಾನೆ. ಆದರೆ ಬಯೋಮೆಟ್ರಿಕ್ ವೆರಿಫಿಕೇಶನ್ ಆಗುವ ಮುನ್ನ ಕೈಗೆ ಸ್ಯಾನಿಟೈಜರ್ ಹಾಕಿದಾಗ ಅಂಟಿಸಿದ ಚರ್ಮ ಕಿತ್ತು ಬಿದ್ದಿದೆ. ಈ ಘಟನೆಯ ನಂತರ ಅಭ್ಯರ್ಥಿ ಮನೀಷ್ ಕುಮಾರ್ ಮತ್ತು ರಾಜ್ಯಗುರು ಗುಪ್ತಾ ಇವರನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರೂ ಆರೋಪಿಗಳು ಬಿಹಾರ್​ನ ಮುಂಗೇರ್ ಪಟ್ಟಣದ ನಿವಾಸಿಗಳು. ಇವರ ವಿರುದ್ಧ ವಂಚನೆ ಮತ್ತು ಫೋರ್ಜರಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಿಬ್ಬರು ಸುಮಾರು 22 ವರ್ಷಯ ವಯಸ್ಸಿನವರಾಗಿದ್ದು 12ನೇ ತರಗತಿ ಪಾಸು ಮಾಡಿದ್ದಾರೆ. ವಡೋದರದ ಲಕ್ಷ್ಮೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ಪ್ರಕಾರ, ರೈಲ್ವೆ ಇಲಾಖೆಯಿಂದ ಅಧಿಕೃತಗೊಂಡ ಖಾಸಗಿ ಕಂಪನಿಯು ಆಗಸ್ಟ್ 22 ರಂದು ಇಲ್ಲಿನ ಲಕ್ಷ್ಮೀಪುರ ಪ್ರದೇಶದ ಕಟ್ಟಡವೊಂದರಲ್ಲಿ ರೈಲ್ವೆ 'ಡಿ' ಗ್ರೂಪ್ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಯನ್ನು ಏರ್ಪಡಿಸಿತ್ತು. ಇದರಲ್ಲಿ 600 ಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು.

ಯಾವುದೇ ರೀತಿಯ ಮೋಸವನ್ನು ತಡೆಗಟ್ಟಲು ಎಲ್ಲ ಅಭ್ಯರ್ಥಿಗಳು ತಮ್ಮ ಹೆಬ್ಬೆರಳಿನ ಗುರುತನ್ನು ನೀಡಬೇಕಾಗಿತ್ತು. ನಂತರ ಪರೀಕ್ಷೆಯ ಮೊದಲು ಬಯೋಮೆಟ್ರಿಕ್ ಸಾಧನದ ಮೂಲಕ ಅವರ ಆಧಾರ್ ಡೇಟಾದೊಂದಿಗೆ ಇದನ್ನು ಹೊಂದಾಣಿಕೆ ಮಾಡಲಾಯಿತು. ಆ ಸಮಯದಲ್ಲಿ ಸಾಧನವು ಅಭ್ಯರ್ಥಿಯ ಹೆಬ್ಬೆರಳಿನ ಗುರುತನ್ನು ನೋಂದಾಯಿಸಲು ವಿಫಲವಾಗಿದೆ. ಪುನರಾವರ್ತಿತ ಪ್ರಯತ್ನಗಳ ಹೊರತಾಗಿಯೂ ಮನೀಶ್ ಕುಮಾರ್ ಎಂಬ ಹೆಸರು ಕಾಣಿಸಿಕೊಂಡಿತು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್ ಎಂ ವರೋಟಾರಿಯಾ ತಿಳಿಸಿದ್ದಾರೆ.

ಅಭ್ಯರ್ಥಿ ತನ್ನ ಎಡಗೈಯನ್ನು ಪ್ಯಾಂಟ್‌ನ ಜೇಬಿನೊಳಗೆ ಇಟ್ಟು ಏನೋ ಮರೆಮಾಚಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿದ ಪರೀಕ್ಷಾ ಮೇಲ್ವಿಚಾರಕರಿಗೆ ಅನುಮಾನ ಬಂದಿದೆ. ಆಗ ಮೇಲ್ವಿಚಾರಕರು ಆತನ ಎಡಗೈ ಹೆಬ್ಬೆರಳಿಗೆ ಸ್ಯಾನಿಟೈಸರ್ ಸಿಂಪಡಿಸಿದಾಗ ಅದರ ಮೇಲೆ ಅಂಟಿಸಲಾದ ಚರ್ಮ ಉದುರಿಹೋಯಿತು ಎಂದು ಅಧಿಕಾರಿ ಹೇಳಿದರು.

ವಂಚನೆಯ ಬಗ್ಗೆ ತಿಳಿದ ನಂತರ ಸಂಸ್ಥೆಯು ಪೊಲೀಸರಿಗೆ ಕರೆ ಮಾಡಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 465 (ನಕಲಿ), 419 (ವಂಚನೆ) ಮತ್ತು 120-ಬಿ (ಅಪರಾಧದ ಪಿತೂರಿ) ಅಡಿಯಲ್ಲಿ ದೂರು ದಾಖಲಿಸಿದೆ. ಸಿಕ್ಕಿಬಿದ್ದ ವ್ಯಕ್ತಿ ತನ್ನ ನಿಜವಾದ ಹೆಸರು ರಾಜ್ಯಗುರು ಗುಪ್ತ ಎಂದು ಪೊಲೀಸರಿಗೆ ತಿಳಿಸಿದ್ದು, ತನ್ನ ಸ್ನೇಹಿತ ಮನೀಶ್ ಕುಮಾರ್ ಸೋಗಿನಲ್ಲಿ ಪರೀಕ್ಷೆಗೆ ಹಾಜರಾಗಲು ಬಂದಿದ್ದ.

ಗುಪ್ತಾ ಅಧ್ಯಯನದಲ್ಲಿ ಜಾಣನಾಗಿದ್ದರಿಂದ ರೈಲ್ವೆ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದ ಕುಮಾರ್, ನಕಲಿ ಗುರುತಿನ ಮೂಲಕ ಗುಪ್ತಾನನ್ನು ನೇಮಕಾತಿ ಪರೀಕ್ಷೆಗೆ ಕಳುಹಿಸುವ ಆಲೋಚನೆಯನ್ನು ಹೊಂದಿದ್ದ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಪರೀಕ್ಷೆಗೆ ಒಂದು ದಿನ ಮುಂಚಿತವಾಗಿ ಕುಮಾರ್ ತನ್ನ ಎಡಗೈ ಹೆಬ್ಬೆರಳನ್ನು ಬಿಸಿ ಅಡುಗೆ ಪ್ಯಾನ್‌ಗೆ ತಾಗಿಸಿದ್ದಾನೆ. ಆಗ ಚರ್ಮದ ಮೇಲೆ ಗುಳ್ಳೆ ಬಂದಿದೆ. ಹೀಗೆ ಗುಳ್ಳೆ ಬಂದಾಗ ಬ್ಲೇಡ್ ಬಳಸಿ ಚರ್ಮವನ್ನು ತೆಗೆದು ಗುಪ್ತಾನ ಎಡ ಹೆಬ್ಬೆರಳಿಗೆ ಅಂಟಿಸಿದ್ದ.

ABOUT THE AUTHOR

...view details