ಕೋಲ್ಕತ್ತಾ (ಪಶ್ಚಿಮ ಬಂಗಾಳ): 23 ವರ್ಷಗಳ ಹಿಂದೆ ಒಡಿಶಾ ಕರಾವಳಿಗೆ ಅಪ್ಪಳಿಸಿದ್ದ ಸೂಪರ್ ಸೈಕ್ಲೋನ್‌ನಲ್ಲಿ ಸಾವನ್ನಪ್ಪಿದ್ದಾನೆ ಎಂದೇ ಭಾವಿಸಲಾಗಿದ್ದ ವ್ಯಕ್ತಿಯೊಬ್ಬರು ಮತ್ತೆ ತಮ್ಮ ಕುಟುಂಬವನ್ನು ಸೇರಿಕೊಂಡಿದ್ದಾರೆ. ಅಂದಾಜು 80 ವರ್ಷದ ಕೃತಿಚಂದ್ರ ಬರಾಲ್ ಎಂಬುವವರನ್ನು ವಿವಿಧ ಸಂಘಟಕರು ಸೇರಿಕೊಂಡು ಅವರ ಕುಟುಂಬವನ್ನು ಪತ್ತೆ ಹಚ್ಚಿಸಿ ಒಂದುಗೂಡಿಸಿದ್ದಾರೆ.
ಹೌದು, 1999ರಲ್ಲಿ ಒಡಿಶಾದಲ್ಲಿ ಸಂಭವಿಸಿದ್ದ ಭೀಕರ ಚಂಡಮಾರುತ 10 ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತ್ತು. ಇದೇ ಚಂಡಮಾರುತದಲ್ಲಿ ಕೃತಿಚಂದ್ರ ಬರಾಲ್ ನಾಪತ್ತೆಯಾಗಿದ್ದರು. ಇನ್ನೇನು ಕೃತಿಚಂದ್ರ ಬರಾಲ್ ಮೃತಪಟ್ಟಿದ್ದಾರೆ ಎಂದೇ ಕುಟುಂಬದವರು ತಿಳಿದುಕೊಂಡಿದ್ದರು. ಇದೀಗ ಆಂಧ್ರಪ್ರದೇಶದ ಮಿಷನರೀಸ್ ಆಫ್ ಚಾರಿಟಿ (ಎಂಒಸಿ) ಮತ್ತು ಹವ್ಯಾಸಿ ರೇಡಿಯೋ ಆಪರೇಟರ್‌ಗಳ ಸಂಘಟನೆಯಾದ ಪಶ್ಚಿಮ ಬಂಗಾಳ ರೇಡಿಯೋ ಕ್ಲಬ್ ನೆರವಿನಿಂದ ಕೃತಿಚಂದ್ರ ಬಲಾಲ್ ಅವರು ತಮ್ಮ ಕುಟುಂಬವನ್ನು ಸೇರಿಕೊಂಡಿದ್ದಾರೆ.
ನೆನಪಿನ ಶಕ್ತಿ ಕಳೆದುಕೊಂಡಿದ್ದ ಕೃತಿಚಂದ್ರ ಬಲಾಲ್:ಚಂಡಮಾರುತಕ್ಕೆ ಸಿಲುಕಿದ್ದ ಕೃತಿಚಂದ್ರ ಬಲಾಲ್ ತಮ್ಮ ನೆನಪಿನ ಶಕ್ತಿಯನ್ನು ಕಳೆದುಕೊಂಡಿದ್ದರು. ಆದರೆ, ಅದು ಹೇಗೋ ಆಂಧ್ರ ಪ್ರದೇಶದ ವಿಶಾಖಪಟ್ಟಣಕ್ಕೆ ಬಂದು ಸೇರಿಕೊಂಡಿದ್ದರು. 2012ರಲ್ಲಿ ವಿಶಾಖಪಟ್ಟಣ ನಗರದ ಪಾದಚಾರಿ ರಸ್ತೆಯಲ್ಲಿ ಆಶ್ರಯ ತಾಣ ಮಾಡಿಕೊಂಡಿದ್ದರು.
ಆಗ ಗ್ರೇಟರ್ ವಿಶಾಖಪಟ್ಟಣಂನ ಕಾರ್ಪೊರೇಟರ್ ಆಗಿದ್ದ ಎ.ಜೆ. ಸ್ಟಾಲಿನ್ ಅವರ ಕಣ್ಣಿಗೆ ಕೃತಿಚಂದ್ರ ಬಲಾಲ್ ಬಿದ್ದಿದ್ದರು. ಅಂತೆಯೇ, ಬಲಾಲ್ ಮೇಲೆ ಕರುಣೆ ತೋರಿದ ಸ್ಟಾಲಿನ್, ಪ್ರತಿದಿನ ಆಹಾರ ಒದಗಿಸುತ್ತಿದ್ದರು. ಆದರೆ, ಒಂದು ಮಧ್ಯಾಹ್ನ ಸ್ಟಾಲಿನ್ ಎಂದಿನಂತೆ ತಮ್ಮ ಕಾರನ್ನು ನಿಲ್ಲಿಸಿ ಹಾರ್ನ್ ಮಾಡಿದರೂ ಬಲಾಲ್ ಆಹಾರ ಸ್ವೀಕರಿಸಲು ಬಂದಿರಲಿಲ್ಲ. ಇದರಿಂದ ಕಾರು ಇಳಿದು ಅವರೇ ಆತನಿಗಾಗಿ ಹುಡುಕಾಟ ಆರಂಭಿಸಿದಾಗ ಅನಾರೋಗ್ಯದಿಂದ ಬಳಲುತ್ತಿರುವುದು ಗೊತ್ತಾಗಿತ್ತು.
ನಂತರ ಮಿಷನರೀಸ್ ಆಫ್ ಚಾರಿಟಿ (ಎಂಒಸಿ)ಯನ್ನು ಸ್ಟಾಲಿನ್ ಸಂಪರ್ಕಿಸಿ, ಪೊಲೀಸ್ ಅನುಮತಿ ಮೇಲೆ ಅಲ್ಲಿ ಬಲಾಲ್ ಅವರನ್ನು ಬಿಟ್ಟಿದ್ದರು. ಬಳಿಕ ಆರೋಗ್ಯ ಸ್ಥಿತಿ ಸುಧಾರಿಸಿದರೂ, ಬಲಾಲ್ ಅವರಿಗೆ ಹಿಂದಿನ ನೆನಪಿನ ಶಕ್ತಿ ಬಂದಿರಲಿಲ್ಲ. ಕೆಲವೊಮ್ಮೆ ಶ್ರೀಕಾಕುಲಂ ಎಂಬ ಪದವನ್ನು ಉಚ್ಚರಿಸುತ್ತಿದ್ದರು. ಹೀಗಾಗಿಯೇ ಬರಲ್ ಶ್ರೀಕಾಕುಲಂ ಮೂಲದವರಿರಬೇಕೆಂದು ಎಂದು ಶ್ರೀಕಾಕುಳಂ ಬಳಿಯ ಎಂಒಸಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಯಾರಾದರೂ ಬಲಾಲ್ ಅವರನ್ನು ಗುರುತಿಸಬಹುದು ಎಂದು ಭಾವಿಸಿ ಮಿಷನರಿಗಳು ಹಳ್ಳಿಗಳಿಗೆ ಹೋಗುವಾಗ ತಮ್ಮೊಂದಿಗೆ ಕರೆದುಕೊಂಡಿದ್ದರು ಹೋಗುತ್ತಿದ್ದರು. ಆದರೆ, ಪರಿಚಯಸ್ಥರಾಗಲಿ ಮತ್ತು ಕುಟುಂಬಸ್ಥರನ್ನಾಗಲಿ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ.