ಜಾಯ್‌ನಗರ (ಪಶ್ಚಿಮ ಬಂಗಾಳ): ಪತ್ನಿ ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಪತಿ, ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹರಿನಾರಾಯಣಪುರ ಗ್ರಾಮದ ನಲಿಕಟ ಮೋರ್ನಲ್ಲಿ ನಡೆದಿದೆ. ಅಪರ್ಣಾ ಬೈದ್ಯ (28) ಮೃತ ಮಹಿಳೆ. ಪರಿಮಳ್ ಬೈದ್ಯ ಆರೋಪಿ ಪತಿ.
ಘಟನೆ ಬಗ್ಗೆ ಮಾಹಿತಿ ಪಡೆದ ತಕ್ಷಣ ಜಾಯ್‌ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಆರೋಪಿ ಪತಿ ಪರಿಮಳ್ ಬೈದ್ಯ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಮೃತ ಅಪರ್ಣಾ ಪುತ್ರ ಮಾತನಾಡಿ, ''ಪೋಷಕರ ನಡುವೆ ಮೊಬೈಲ್ ವಿಚಾರವಾಗಿ ಆಗಾಗ ಜಗಳ ನಡೆಯುತ್ತಿತ್ತು. ನನ್ನ ತಂದೆ, ತಾಯಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದರು. ಇಂದು ನಾನು ಟ್ಯೂಷನ್ಗೆ ಹೋಗಿದ್ದೆ, ಟ್ಯೂಷನ್ ಮುಗಿಸಿಕೊಂಡು ಮನೆಗೆ ಬಂದಾಗ ನನ್ನ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು" ಎಂದು ತಿಳಿಸಿದ್ದಾರೆ.
ಮಗ್ರಾಹತ್ ನಿವಾಸಿ ಪರಿಮಳ್ ಅವರೊಂದಿಗೆ 17 ವರ್ಷಗಳ ಹಿಂದೆ ವಿವಾಹವಾಗಿದ್ದ ಅಪರ್ಣಾ ಬೈದ್ಯ, ಗಾರೆ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ, ಅಪರ್ಣಾ ತನ್ನ ಸ್ಮಾರ್ಟ್‌ಫೋನ್‌ನಲ್ಲಿ ಯೂಟ್ಯೂಬ್ ರೀಲ್ಸ್ ಮಾಡುತ್ತಿದ್ದರು. ಇದರಿಂದಾಗಿ ಅವರಿಗೆ ಹಲವು ಸ್ನೇಹಿತರು ಪರಿಚಯವಾಗಿದ್ದರು. ಅಪರ್ಣಾ ಯಾವಾಗಲೂ ಆ ಸ್ನೇಹಿತರೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಇದರಿಂದ ಪತಿಗೆ ಆಕೆಯ ಮೇಲೆ ಅನುಮಾನ ಮೂಡಿತ್ತು. ಇದೇ ವಿಚಾರವಾಗಿ ಅಪರ್ಣಾ ತನ್ನ ಪತಿಯನ್ನು ತೊರೆದು ಕೆಲವು ದಿನ ಬೇರೆಡೆ ವಾಸವಾಗಿದ್ದಳು ಎಂದು ಹೇಳಲಾಗುತ್ತಿದೆ. ಇದರಿಂದ ಬೇಸತ್ತ ಪತಿ ಈ ಕೃತ್ಯ ಎಸೆಗಿದ್ದಾನೆ ಎಂದು ಶಂಕಿಸಲಾಗಿದೆ.