ಹೈದರಾಬಾದ್(ತೆಲಂಗಾಣ):ಪತ್ನಿಯನ್ನು ಕೊಂದು, ಆಕೆ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾಳೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದ ಪಾಪಿ ಪತಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಹೈದರಾಬಾದ್ನ ವನಸ್ಥಲಿಪುರಂ ಏರಿಯಾದಲ್ಲಿ ಘಟನೆ ನಡೆದಿದ್ದು, ಕವಿತಾ ಕೊಲೆಯಾದ ಗೃಹಿಣಿಯಾಗಿದ್ದಾಳೆ. ಆಟೋ ರಿಕ್ಷಾ ಚಾಲಕನಾಗಿದ್ದ ರಮಾವತ್ ವಿಜಯ್ ನಾಯಕ್ ಪತ್ನಿಯನ್ನು ಕೊಂದು, ಆಕೆ ಕೊರೊನಾದಿಂದ ಸಾವನ್ನಪ್ಪಿದ್ದಾಳೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಆರೋಪಿ.
ಸಂದೇಹವೇ ಕಾರಣ..
ಕವಿತಾ ಬೇರೊಬ್ಬನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಳು ಎಂದು ಅನುಮಾನಪಟ್ಟಿದ್ದ ರಮಾವತ್ ಆಕೆಯನ್ನು ಕೊಂದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಜೂನ್ 18ರಂದು ಕವಿತಾ ಮಲಗಿರಬೇಕಾದರೆ ತಲೆದಿಂಬಿನ ಮೂಲಕ ಆಕೆಯನ್ನು ಉಸಿರುಗಟ್ಟಿಸಿ ಕೊಂದು, ಆಕೆಯ ಪೋಷಕರಿಗೆ ಕೋವಿಡ್ ಕಾರಣಕ್ಕೆ ಕವಿತಾ ಸಾವನ್ನಪ್ಪಿದ್ದಾಳೆ. ವನಸ್ಥಲಿಪುರಂ ಏರಿಯಾ ಆಸ್ಪತ್ರೆಯಲ್ಲಿ ಆಕೆಗೆ ಸೋಂಕು ಪರೀಕ್ಷೆ ಮಾಡಲಾಗಿತ್ತು ಎಂದು ರಮಾವತ್ ನಂಬಿಸಿದ್ದನು.
ತನ್ನದೇ ಆಟೋ ರಿಕ್ಷಾದಲ್ಲಿ ಮೃತದೇಹವನ್ನ ಆಕೆಯ ಪೋಷಕರೊಂದಿಗೆ ಪಿಲ್ಲಿಗುಂಡ್ಲ ಗ್ರಾಮಕ್ಕೆ ಒಯ್ದು ಅಂತ್ಯಸಂಸ್ಕಾರವನ್ನು ನಡೆಸಲಾಗಿತ್ತು. ಈ ವೇಳೆ ಮೃತದೇಹವನ್ನು ಮುಟ್ಟಲು ಆಕೆಯ ಪೋಷಕರಿಗೆ ಆತ ಅನುಮತಿ ನೀಡಿರಲಿಲ್ಲ.