ಖೋವಾಯಿ (ತ್ರಿಪುರಾ):40 ವರ್ಷದ ವ್ಯಕ್ತಿಯೊಬ್ಬ ತನ್ನ ಇಬ್ಬರು ಪುಟ್ಟ ಹೆಣ್ಣುಮಕ್ಕಳು, ತನ್ನ ಒಡಹುಟ್ಟಿದ ಅಣ್ಣ, ಪೊಲೀಸ್ ಇನ್ಸ್‌ಪೆಕ್ಟರ್ ಸೇರಿ ಐವರನ್ನು ಕೊಲೆ ಮಾಡಿರುವ ಅಮಾನವೀಯ ಘಟನೆ ತ್ರಿಪುರಾದ ಖೋವಾಯಿ ಜಿಲ್ಲೆಯಲ್ಲಿ ನಡೆದಿದೆ.
ಸಿಕ್ಕ ಸಿಕ್ಕವರ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ
ಖೋವಾಯಿ ಜಿಲ್ಲೆಯ ರಾಮಚಂದ್ರಘಾಟ್ ನಿವಾಸಿ ಪ್ರದೀಪ್ ಡೆಬ್ರಾಯ್ ಶುಕ್ರವಾರ ಘೋರ ಕೃತ್ಯವೊಂದನ್ನು ಎಸಗಿದ್ದಾನೆ. ಅಂದು ರಾತ್ರಿ 11.30ರ ವೇಳೆಗೆ ತನ್ನ 1 ಮತ್ತು 7 ವರ್ಷದ ಇಬ್ಬರು ಹೆಣ್ಣು ಮಕ್ಕಳು, ಪತ್ನಿ ಮೀನಾ ಡೆಬ್ರಾಯ್ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿದ್ದಾನೆ.
ಇದನ್ನು ಬಿಡಿಸಲು ಬಂದ ಆತನ ಅಣ್ಣ ಮಲೇಶ್ ಡೆಬ್ರಾಯ್ (45) ಮೇಲೂ ಹಲ್ಲೆ ಮಾಡಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಖೋವಾಯಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸತ್ಯಜಿತ್ ಮಲ್ಲಿಕ್ ಮೇಲೂ ಹಲ್ಲೆ ಮಾಡಿದ್ದಾನೆ. ಅಷ್ಟೇ ಅಲ್ಲ, ರಸ್ತೆಯಲ್ಲಿ ಹೋಗುತ್ತಿದ್ದ ಅಪ್ಪ-ಮಕ್ಕಳ (ದಾರಿಹೋಕರು) ಮೇಲೂ ದಾಳಿ ನಡೆಸಿದ್ದಾನೆ.
ಮೃತ ಪೊಲೀಸ್ ಇನ್ಸ್‌ಪೆಕ್ಟರ್ ಸತ್ಯಜಿತ್ ಮಲ್ಲಿಕ್ ಐವರು ಸಾವು
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆರೋಪಿಯ ಇಬ್ಬರು ಮಕ್ಕಳು ಹಾಗೂ ಸಹೋದರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಲೆಗೆ ಬಲವಾದ ಹೊಡೆತ ತಿಂದಿದ್ದ ಇನ್ಸ್‌ಪೆಕ್ಟರ್ ಚಿಕಿತ್ಸೆ ವೇಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ದಾರಿ ಹೋಕರಾದ ಕೃಷ್ಣ ದಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಮಗ ಕರ್ಣಾಧೀರ್ ದಾಸ್ (22) ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆರೋಪಿಯ ಪತ್ನಿ ಮೀನಾ ಡೆಬ್ರಾಯ್ಗೆ ಗಂಭೀರ ಗಾಯಗಳಾಗಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಇದನ್ನೂ ಓದಿ:ಶೀಲ ಶಂಕಿಸಿ ಪತ್ನಿಯ ಕೊಲೆ ಮಾಡಿ ನೆರೆ ರಾಜ್ಯಕ್ಕೆ ತೆರಳಿದ್ದ ಗಂಡ ಬೀದಿ ಹೆಣವಾದ..
ಹೆಚ್ಚು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಪ್ರದೀಪ್ ಡೆಬ್ರಾಯ್ನನ್ನು ಬಂಧಿಸಿದ್ದಾರೆ. ಈತ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎಂದು ಹೇಳಲಾಗಿದೆ. ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಸಿಎಂ ಸಂತಾಪ
ಘಟನೆಯನ್ನು ಖಂಡಿಸಿರುವ ತ್ರಿಪುರಾ ಮುಖ್ಯಮಂತ್ರಿ ವಿಪ್ಲವ್ ಕುಮಾರ್ ದೇವ್ ಟ್ವಿಟರ್ನಲ್ಲಿ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಮೃತ ಪೊಲೀಸ್ ಇನ್ಸ್‌ಪೆಕ್ಟರ್ ಸತ್ಯಜಿತ್ ಮಲ್ಲಿಕ್ ಅವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.