ರಾಮನಗರ(ಉತ್ತರಾಖಂಡ):ಇಲ್ಲಿನ ಜಿಮ್ ಕಾರ್ಬೆಟ್ ಅಭಯಾರಣ್ಯದ ಅಂಚಿನಲ್ಲಿ ಯುವಕನನ್ನು ಹುಲಿ ಎಳೆದೊಯ್ದ ಘಟನೆ ನಡೆದಿದ್ದು, ಆತನ ಮೃತದೇಹ ಪತ್ತೆ ಮಾಡಲಾಗಿದೆ. ರಾತ್ರಿ ವೇಳೆ ಮೂವರು ಸ್ನೇಹಿತರು ಅರಣ್ಯದಂಚಿನಲ್ಲಿ ಮದ್ಯ ಸೇವನೆ ಮಾಡುತ್ತಿದ್ದಾಗ ದಾಳಿ ನಡೆಸಿದ ವ್ಯಾಘ್ರ ಓರ್ವನನ್ನು ಎಳೆದೊಯ್ದಿತ್ತು. ಇದರಿಂದ ಗ್ರಾಮಸ್ಥರಲ್ಲಿ ಈಗ ಭೀತಿ ಮೂಡಿದೆ.
ಏನಾಗಿತ್ತು?:ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಪಕ್ಕದ ಮೋಹನ್ ಪ್ರದೇಶದಲ್ಲಿ ಮೂವರು ಯುವಕರು ರಾತ್ರಿ ವೇಳೆ ಮದ್ಯ ಸೇವನೆಗೆ ತೆರಳಿದ್ದಾರೆ. ಇದೇ ವೇಳೆ ಹುಲಿ ದಾಳಿ ನಡೆಸಿ ಓರ್ವನನ್ನು ಎಳೆದೊಯ್ದಿದೆ. ಇನ್ನಿಬ್ಬರು ತಪ್ಪಿಸಿಕೊಂಡು ಬಂದು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಬಳಿಕ ಕಾರ್ಯಾಚರಣೆ ನಡೆಸಿದ ಅರಣ್ಯ ಸಿಬ್ಬಂದಿ ರಾಷ್ಟ್ರೀಯ ಹೆದ್ದಾರಿ 309ರಲ್ಲಿ ಯುವಕನ ಮೃತದೇಹವನ್ನು ಪೊದೆಯಲ್ಲಿ ಪತ್ತೆ ಮಾಡಿದ್ದಾರೆ. ಇದಾದ ಬಳಿಕ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಲಿ ಘರ್ಜನೆ ಕೇಳಿಬಂದಿದೆ. ಗಸ್ತು ತಿರುಗುತ್ತಿದ್ದ ಅರಣ್ಯ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ರಾತ್ರಿ ವೇಳೆ ಮದ್ಯ ಸೇವನೆಗೆ ನಿಷೇಧಿತ ಪ್ರದೇಶದಲ್ಲಿ ತೆರಳಿದ ಆರೋಪದ ಮೇಲೆ ಉಳಿದ ಇಬ್ಬರು ಯುವಕರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಮೃತನ ಕುಟುಂಬಕ್ಕೆ ನಿಯಮಾನುಸಾರ ಪರಿಹಾರ ಕೊಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಓದಿ:ಕಾಡಾನೆ ದಾಳಿಗೆ ಚಿಕ್ಕಮಗಳೂರಲ್ಲಿ ರೈತ ಬಲಿ.. ಭೈರನ ಸೆರೆಯಿಂದ ನಿಟ್ಟುಸಿರು ಬಿಟ್ಟ ಜನರಿಗೆ ಮತ್ತೆ ಆತಂಕ