ಅಹಮದಾಬಾದ್ (ಗುಜರಾತ್):ಗುಜರಾತ್‌ನ ಅಹಮದಾಬಾದ್‌ನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಯಂತೆ ಸೋಗು ಹಾಕಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ನಕಲಿ ಅಧಿಕಾರಿಯನ್ನು ಗುಂಜಾನ್ ಹಿರೇನ್‌ಭಾಯ್ (31) ಎಂದು ಗುರುತಿಸಲಾಗಿದೆ. ಈತ ಮೂಲತಃ ಗುಜರಾತ್‌ನ ಅಮ್ರೇಲಿ ಜಿಲ್ಲೆಯ ನಿವಾಸಿಯಾಗಿದ್ದು, ಪ್ರಸ್ತುತ ಗಾಂಧಿನಗರದಲ್ಲಿ ವಾಸಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಗುಜರಾತ್ ಎಟಿಎಸ್ ಕಚೇರಿಯಲ್ಲಿ ನಿಯೋಜಿಸಲಾದ ಪಿಎಸ್ಐ ಸೋಲಾ ಹೈಕೋರ್ಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಆರೋಪಿ ಗುಂಜಾನ್ ಹಿರೇನ್‌ಭಾಯ್ ಸಿಕ್ಕಿ ಬಿದ್ದಿದ್ದಾನೆ. ಆರೋಪಿಯು ಎನ್‌ಐಎ ಅಧಿಕಾರಿಯಂತೆ ಸೋಗು ಹಾಕಿಕೊಂಡು ಎಟಿಎಸ್ ಕಚೇರಿಗೆ ಬಂದಿದ್ದ ಎಂದು ಪಿಎಸ್‌ಐ ತಮ್ಮ ದೂರಿನಲ್ಲಿ ತಿಳಿಸಿದ್ದರು. ಆದರೆ, ಎಟಿಎಸ್ ಕಚೇರಿಯಲ್ಲಿದ್ದ ಅಧಿಕಾರಿಗಳು ಈತನ ಬಗ್ಗೆ ಅನುಮಾನಗೊಂಡು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಬಂಧಿತ ಗುಂಜಾನ್ ಹಿರೇನ್‌ಭಾಯ್ ಬಳಿ ಮೂರು ವಿವಿಧ ಸರ್ಕಾರಿ ಇಲಾಖೆಗಳ ನಕಲಿ ಗುರುತಿನ ಚೀಟಿಗಳು ಪತ್ತೆಯಾಗಿವೆ. ಒಂದು ಗುರುತಿನ ಚೀಟಿಯಲ್ಲಿ ಆರೋಪಿಯನ್ನು ಗೃಹ ಸಚಿವಾಲಯದ ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ ಗುಂಜನ್ ಹಿರೇನ್‌ಭಾಯ್ ಕಾಂಟಿಯಾ ಶ್ರೇಣಿಯ ಸಬ್ ಇನ್ಸ್‌ಪೆಕ್ಟರ್ (ನಿಯೋಜನಾ) ಎಂದು ನಮೂದಿಸಲಾಗಿದೆ. ಈ ಗುರುತಿನ ಚೀಟಿಯು ಎನ್‌ಕೆ ತ್ಯಾಗಿ ಪೊಲೀಸ್ ಸೂಪರಿಂಟೆಂಡೆಂಟ್ (ಆಡಳಿತ) ಎನ್‌ಐಎ ಅವರ ಸಹಿಯನ್ನು ಹೊಂದಿದೆ.