ಕೋಲ್ಕತ್ತಾ (ಪಶ್ಚಿಮ ಬಂಗಾಳ):ದುಬಾರಿಯಾದ ವಿದೇಶಿ ಬ್ರಾಂಡ್ ವಾಚ್‌ಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಶನಿವಾರ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ)ದ ಅಧಿಕಾರಿಗಳು ಬಂಧಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಬಂಧಿತನಿಂದ ದುಬಾರಿ ಬೆಲೆಯ ಗ್ರೂಬೆಲ್ ಫೋರ್ಸೆ ಬ್ರಾಂಡ್ ವಾಚ್ ವಶಪಡಿಸಿಕೊಂಡಿದ್ದರೆ, ಆತನ ಮನೆಯಲ್ಲಿ 34 ವಾಚ್‌ಗಳನ್ನು ಪತ್ತೆ ಹಚ್ಚಲಾಗಿದೆ. ಇವುಗಳ ಒಟ್ಟು ಮೌಲ್ಯ ಬರೋಬ್ಬರಿ 30 ಕೋಟಿ ರೂಪಾಯಿಗಳಿಗಿಂತ ಹೆಚ್ಚು!.
ಆರೋಪಿ ಸಿಂಗಾಪುರದಿಂದ ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ. ಈ ವೇಳೆ, ಕಾರ್ಯಾಚರಣೆ ಕೈಗೊಂಡು ವಿಮಾನ ನಿಲ್ದಾಣದಲ್ಲಿ ಆರೋಪಿಯನ್ನು ಸೆರೆಹಿಡಿಯಲಾಗಿದೆ. ನಂತರ ಆತ ಮೇಲೆಯೂ ದಾಳಿ ನಡೆಸಲಾಯಿತು. ಇದರಿಂದ ವಿವಿಧ ಪ್ರೀಮಿಯಂ ಬ್ರ್ಯಾಂಡ್‌ಗಳ 34 ಉನ್ನತ ಮಟ್ಟದ ಕೈಗಡಿಯಾರಗಳನ್ನು ವಶ ಪಡಿಸಿಕೊಳ್ಳಲು ಕಾರಣವಾಗಿದೆ. ಇವುಗಳಲ್ಲಿ ಗ್ರೂಬೆಲ್ ಫೋರ್ಸೆ, ಪರ್ನೆಲ್, ಲೂಯಿ ವಿಟಾನ್, ಎಂಬಿ ಆ್ಯಂಡ್ ಎಫ್, ಮ್ಯಾಡ್, ರೋಲೆಕ್ಸ್, ಆಡೆಮರ್ಸ್ ಪಿಗೆಟ್, ರಿಚರ್ಡ್ ಮಿಲ್ಲೆ ಅಂತಹ ದುಬಾರಿ ವಾಚ್ಗಳು ಸೇರಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ವಾಚ್‌ಗಳಲ್ಲಿ ಹೆಚ್ಚಿನವು ಅತ್ಯಧಿಕ ಮೌಲ್ಯದ ಸೀಮಿತ ಆವೃತ್ತಿಯ ವಾಚ್‌ಗಳಾಗಿವೆ. ಎಲ್ಲ ವಾಚ್‌ಗಳ ಒಟ್ಟು ಮಾರುಕಟ್ಟೆ ಮೌಲ್ಯವು 30 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ. ಕಸ್ಟಮ್ಸ್ ಸುಂಕ ಶುಲ್ಕವನ್ನು ಪಾವತಿಸದೇ ಈ ವಾಚ್‌ಗಳನ್ನು ದೇಶಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎಂದು ಅವರು ವಿವರಿಸಿದ್ದಾರೆ.