ರಾಯಪುರ:ಛತ್ತೀಸ್‌ಗಢದ ಸೂರಜ್‌ಪುರದಲ್ಲಿ ಲಾಕ್‌ಡೌನ್ ಮಧ್ಯೆ ಔಷಧಿ ಖರೀದಿಸಲು ಹೊರಟಿದ್ದ ವ್ಯಕ್ತಿಯೊಬ್ಬನನ್ನು ಜಿಲ್ಲಾಧಿಕಾರಿಯೊಬ್ಬರು ತಡೆದು, ಆತನಿಗೆ ಕಪಾಳಮೋಕ್ಷ ಮಾಡಿ ಮೊಬೈಲ್ ಕಸಿದು ರಸ್ತೆಗೆಸೆದ ಪ್ರಸಂಗ ನಡೆದಿದೆ. ಈ ಘಟನೆಯ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಡೀಸಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಮೊಬೈಲ್ನಲ್ಲಿ ಸೆರೆಹಿಡಿಯಲಾದ ವಿಡಿಯೋವೊಂದರಲ್ಲಿ ಜಿಲ್ಲಾಧಿಕಾರಿ ರಣಬೀರ್ ಶರ್ಮಾ ಅವರು ವ್ಯಕ್ತಿಯೋರ್ವನ ಬಳಿಗೆ ಬಂದು ಆತನ ಬಳಿಯಿದ್ದ ಗುರುತಿನ ಚೀಟಿ ಪಡೆಯುತ್ತಾರೆ. ನಂತರ ಮೊಬೈಲ್ ಫೋನ್ ನೀಡುವಂತೆ ಕೇಳುತ್ತಾರೆ. ಆತ ಮೊಬೈಲ್ ಕೊಟ್ಟ ತಕ್ಷಣ ಅದನ್ನು ನೆಲಕ್ಕೆಸೆಯುತ್ತಾರೆ. ಸಿಟ್ಟಿಗೆದ್ದು ಇದ್ದಕ್ಕಿದ್ದಂತೆ ವ್ಯಕ್ತಿಯ ಕಪಾಳಕ್ಕೂ ಹೊಡೆಯುತ್ತಾರೆ.
ಈ ವ್ಯಕ್ತಿಯನ್ನು ಸಾಹಿಲ್ ಗುಪ್ತಾ ಎಂದು ಗುರುತಿಸಲಾಗಿದ್ದು, ಕೋವಿಡ್ ನಿಯಮ ಉಲ್ಲಂಘಸಿದ ಕಾರಣಕ್ಕೆ ಆತನ ವಿರುದ್ಧ ಪೊಲೀಸರು ಪ್ರಕರಣವನ್ನೂ ದಾಖಲಿಸಿಕೊಂಡಿದ್ದರು.