ಮುಂಬೈ:ಪ್ರವಾದಿ ಬಗ್ಗೆ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ಪೋಸ್ಟ್ ಹಂಚಿಕೊಂಡಿದ್ದಕ್ಕೆ ರಾಜಸ್ಥಾನದ ಉದಯ್ಪುರದ ಟೈಲರ್ ಕನ್ಹಯ್ಯ ಲಾಲ್ ಅವರನ್ನು ಮುಸ್ಲಿಂ ಸಮುದಾಯದ ಇಬ್ಬರು ವ್ಯಕ್ತಿಗಳು ಶಿರಚ್ಛೇದ ಮಾಡಿದ್ದರು. ಇದೇ ಉದಯ್ಪುರ ಘಟನೆಯನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಕ್ಕೆ ಕಾಶ್ಮೀರದ ವ್ಯಕ್ತಿಯೊಬ್ಬ ಮುಂಬೈನ15 ವರ್ಷದ ಬಾಲಕಿಗೆ ಜೀವ ಬೆದರಿಕೆ ಹಾಕಿದ್ದು, ಆತನನ್ನು ಬಂಧಿಸಲಾಗಿದೆ.
ಜುಲೈ 1 ರಂದು ಉದಯ್ಪುರದ ದರ್ಜಿ ಕನ್ಹಯ್ಯಾ ಲಾಲ್ ಹತ್ಯೆಯ ಕುರಿತು ಮುಂಬೈನ್ ಬಾಲಕಿ ಫೇಸ್ಬುಕ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಇದನ್ನು 1.4 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಈಕೆ ತನ್ನ ಸಂಪರ್ಕ ಸಂಖ್ಯೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಸಾರ್ವಜನಿಕವಾಗಿ ಹಂಚಿಕೊಂಡಿದ್ದರಿಂದ, ಆಕೆಗೆ ವಾಟ್ಸ್ ಆ್ಯಪ್, ಕರೆಯ ಮೂಲಕ ಜಮ್ಮು ಕಾಶ್ಮೀರದ 30 ವರ್ಷದ ಯುವಕನೊಬ್ಬ ಜೀವ ಬೆದರಿಕೆ ಹಾಕಿದ್ದಾನೆ.
ಈ ಬಗ್ಗೆ ಬಾಲಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಬಳಿಕ ಆರೋಪಿಯ ಪತ್ತೆಗೆ ಮುಂದಾದ ಪೊಲೀಸರು ಆತನ ಮೊಬೈಲ್ ಸಂಖ್ಯೆಯನ್ನು ಮ್ಯಾಟ್ರಿಮೊನಿಯ ಮೂಲಕ ಪತ್ತೆ ಮಾಡಿದ್ದಾರೆ. ತಂಡವನ್ನು ರಚಿಸಿಕೊಂಡು ಜಮ್ಮು ಕಾಶ್ಮೀರಕ್ಕೆ ತೆರಳಿದ್ದ ಪೊಲೀಸರು ಆರೋಪಿಯನ್ನು ಬದ್ಗಾಮ್ ಜಿಲ್ಲೆಯಲ್ಲಿ ಪತ್ತೆ ಮಾಡಿದ್ದಾರೆ. ಆರೋಪಿಯನ್ನು ಫಯಾಜ್ ಅಹ್ಮದ್ ಎಂದು ಗುರುತಿಸಲಾಗಿದೆ.