ಛತ್ತರ್‌ಪುರ (ಮಧ್ಯಪ್ರದೇಶ):ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಚಂದ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಮಾನವೀಯ ಕೃತ್ಯವೊಂದು ಬೆಳಕಿಗೆ ಬಂದಿದೆ. ಇಲ್ಲೊಬ್ಬ ಹುಡುಗ ತನ್ನ ಗೆಳತಿಯೊಂದಿಗೆ ಓಡಿಹೋಗಿದ್ದಾನೆ. ಇದರಿಂದ ಆಕ್ರೋಶಗೊಂಡ ಹುಡುಗಿಯ ಕಡೆಯವರು ಸೇರಿದಂತೆ ಗ್ರಾಮಸ್ಥರು, ಹುಡುಗನ ತಂದೆಗೆ ತಾಲಿಬಾನ್ ರೀತಿಯಲ್ಲೇ ಶಿಕ್ಷೆ ವಿಧಿಸಿದ್ದಾರೆ.
ಹೌದು, ಮೊದಲು ಹುಡಗನ ತಂದೆಯ ಎರಡೂ ಕೈಕಾಲುಗಳನ್ನು ಕಟ್ಟಿದ್ದಾರೆ. ಬಳಿಕ, ಪಂಚಾಯ್ತಿಗೆ ಕರೆತಂದು ಗ್ರಾಮದ ಬೇವಿನ ಮರಕ್ಕೆ ಸರಪಳಿಯಿಂದ ಕಟ್ಟಿ ಹಾಕಿದ್ದಾರೆ. 2 ದಿನಗಳ ಕಾಲ ಹುಡುಗನ ತಂದೆಗೆ ತಾಲಿಬಾನ್ ರೀತಿಯಲ್ಲೇ ಶಿಕ್ಷೆ ವಿಧಿಸಲಾಗಿದೆ. ಯುವಕ ತಮ್ಮ ಹುಡುಗಿಯ ಜೊತೆ ಓಡಿಹೋಗಿದ್ದಕ್ಕಾಗಿ, ಹುಡುಗಿಯ ಮನೆಯವರು, ಹುಡುಗನ ತಂದೆಯನ್ನು ಮರಕ್ಕೆ ಕಟ್ಟಿ ಹಾಕಿ ಮನಬಂದಂತೆ ಥಳಿಸಿದ್ದಾರೆ.
ಎರಡು ದಿನಗಳ ನಂತರ, ಹುಡುಗನ ತಂದೆಯನ್ನು ಆ ಬಂಧನದಿಂದ ಬಿಡುಗಡೆಗೊಳಿಸಲಾಗಿದೆ. ಈ ಘಟನೆಯಿಂದ ಮನನೊಂದು ಹುಡುಗನ ಅಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮತ್ತೊಂದೆಡೆ, ಪೊಲೀಸರು ಈ ಪ್ರಕರಣವನ್ನು ಪ್ರಾಥಮಿಕವಾಗಿ ಆತ್ಮಹತ್ಯೆ ಎಂದು ಪರಿಗಣಿಸಿದ್ದಾರೆ. ಆದರೆ, ತನ್ನ ಪತಿಯನ್ನು ಕೊಲೆ ಮಾಡಲಾಗಿದೆ ಎಂದು ಮೃತನ ಪತ್ನಿ ಆರೋಪಿಸಿದ್ದಾರೆ.
ಹುಡುಗನ ಪೋಷಕರು ಒತ್ತೆಯಾಳು:ಮಾಹಿತಿಯ ಪ್ರಕಾರ, ಜಿಲ್ಲೆಯ ಚಂದ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ಬಚೋನ್ ಚೌಕಿ ವ್ಯಾಪ್ತಿಯ ಪಂಚಂಪುರ ಗ್ರಾಮದಲ್ಲಿ ವಾಸವಾಗಿರುವ ಉಧಾ ಅಹಿರ್ವಾರ್ ಮತ್ತು ಅವರ ಪತ್ನಿ ಸಾವಿತ್ರಿ ಅಹಿರ್ವಾರ್ ಅವರ ಮಗ ತನ್ನ ಗೆಳತಿಯೊಂದಿಗೆ ಪರಾರಿಯಾಗಿದ್ದನು. ನಂತರ ಪೀರಾ ಗ್ರಾಮದ ಹುಡುಗಿಯ ಕಡೆಯವರು ಇಬ್ಬರನ್ನೂ ಹುಡುಕಲು ತೀವ್ರ ಶೋಧ ಆರಂಭಿಸಿದರು. ಆದರೆ, ಅವರ ಪ್ರಯತ್ನ ವಿಫಲವಾದಾಗ, ಹುಡುಗನ ಪೋಷಕರನ್ನು ಒತ್ತೆಯಾಳಾಗಿ ತೆಗೆದುಕೊಂಡು ತಮ್ಮೊಂದಿಗೆ ಕರೆದೊಯ್ದರು. ಹುಡುಗಿಯ ಕಡೆಯವರು ಸಮಾಜದ ಜನರ ಪಂಚಾಯಿತಿಗೆ ಕರೆದರು.
ನಿಮ್ಮ ಮಗ ಮತ್ತು ನಮ್ಮ ಹುಡುಗಿಯನ್ನು ಎಲ್ಲಿದ್ದಾರೆ ಎಂಬುದನ್ನು ಹುಡುಕಿಕೊಡುವಂತೆ ಕೇಳಿದರು. ಇಲ್ಲದಿದ್ದರೆ, ಹುಡುಗನ ಪೋಷಕರನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲಾಗುತ್ತದೆ. ಈ ಬಗ್ಗೆ ಹುಡುಗನ ಪೋಷಕರು, ಇಬ್ಬರನ್ನು ಹುಡುಕಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಆ ಮೇಲೆ ಏನಾಯಿತೆಂದರೆ, ಹುಡುಗಿಯ ಕಡೆಯವರು ಎದ್ದು ಬಂದು, ಉಧಾ ಅಹಿರ್ವಾರ್ನ ಕೈಕಾಲುಗಳನ್ನು ಕಟ್ಟಿದರು. ಬಳಿಕ ಬೇವಿನ ಮರಕ್ಕೆ ಸರಪಳಿಯಿಂದ ಕಟ್ಟಿ ಹಾಕಿ, ಎರಡು ದಿನಗಳವರೆಗೆ ಕೆಟ್ಟದಾಗಿ ಥಳಿಸಿದ್ದಾರೆ.