ಮಾಲ್ಢಾ(ಪಶ್ಚಿಮ ಬಂಗಾಳ): ವ್ಯಕ್ತಿಯೊಬ್ಬ ಪಿಸ್ತೂಲ್ ಹಿಡಿದು ಶಾಲೆಯೊಂದರ ತರಗತಿ ಕೊಠಡಿಗೆ ನುಗ್ಗಿ ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ಇಂದು ಮಾಲ್ಡಾದಲ್ಲಿ ನಡೆದಿದೆ. ಮಾಲ್ಡಾದ ಮುಚ್ಚಿಯ ಚಂದ್ರ ಮೋಹನ್ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದ್ದು, ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ದೇವ್ ವಲ್ಲಭ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಬುಧವಾರ ಮಧ್ಯಾಹ್ನ ತರಗತಿ ನಡೆಯುತ್ತಿರುವ ವೇಳೆ ಕೈಯಲ್ಲಿ ಪಿಸ್ತೂಲ್ ಹಿಡಿದ ವ್ಯಕ್ತಿ ಏಕಾಏಕಿ ತರಗತಿಯ ಕೊಠಡಿಗೆ ನುಗ್ಗಿ ಎಲ್ಲರನ್ನು ಬೆದರಿಸಿದ್ದಾನೆ. ಇದರಿಂದ ವಿದ್ಯಾರ್ಥಿಗಳು ಭಯದಿಂದ ಕೂಗಾಡಿದ್ದಾರೆ. ಶಿಕ್ಷಕರೂ ಸಹ ಬೆಚ್ಚಿಬಿದ್ದು, ಸ್ಥಳೀಯ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಈ ವೇಳೆ ಡಿಎಸ್ಪಿ ಅಜರುದ್ದೀನ್ ಖಾನ್ ತಮ್ಮ ಜೀವವನ್ನು ಪಣಕ್ಕಿಟ್ಟು ಯಾವುದೇ ಅನಾಹುತ ಆಗದಂತೆ ವ್ಯಕ್ತಿಯನ್ನು ಸೆರೆ ಹಿಡಿದಿದ್ದಾರೆ.
ಈ ಬಗ್ಗೆ ಶಾಲೆಯ ಶಿಕ್ಷಕ ದೇಬಾಶಿಸ್ ಶೀಲ್ ಮಾತನಾಡಿ, ಆ ವ್ಯಕ್ತಿಯ ಹೆಸರು ದೇವ್ ವಲ್ಲಭ. ಅವರ ಪತ್ನಿ ಮತ್ತು ಮಗ ಸುಮಾರು ಒಂದು ವರ್ಷದಿಂದ ಕಾಣೆಯಾಗಿದ್ದಾರೆ. ವ್ಯಕ್ತಿ ತನ್ನ ಹೆಂಡತಿ ಮತ್ತು ಮಕ್ಕಳನ್ನು ಹುಡುಕಲು ಹಲವಾರು ಬಾರಿ ಪೊಲೀಸರನ್ನು ಮತ್ತು ಮಾಧ್ಯಮದವರನ್ನು ಸಂಪರ್ಕಿಸಿದ್ದನು. ಆದರೆ ಯಾರೂ ಆತನಿಗೆ ಸಹಾಯ ಮಾಡಿರಲಿಲ್ಲ, ಇಂದು ಶಾಲೆಯ ಮುಖ್ಯ ಗೇಟಿನ ಪಕ್ಕದ ಸಣ್ಣ ಬಾಗಿಲಿನಿಂದ ಶಾಲೆಗೆ ಪ್ರವೇಶಿಸಿದ ವ್ಯಕ್ತಿ ಬ್ಯಾಗ್‌ನಿಂದ ಪಿಸ್ತೂಲ್ ಹೊರತೆಗೆದು ತರಗತಿಯ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿದ್ದ. ಆತನ ಬ್ಯಾಗ್‌ನಲ್ಲಿ ಕೆಲವು ಪೆಟ್ರೋಲ್ ಬಾಂಬ್‌ಗಳೂ ಕೂಡ ಪತ್ತೆಯಾಗಿವೆ. ಈ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂದು ಹೇಳಿದರು.