ಕರ್ನಾಟಕ

karnataka

ETV Bharat / bharat

ಅಶ್ಲೀಲ ವಿಡಿಯೋ ವೈರಲ್ ಮಾಡ್ತೀವಿ ಎಂದು 4 ಲಕ್ಷ ರೂ ಕಿತ್ತ ದುಷ್ಕರ್ಮಿಗಳು! - ವ್ಯಕ್ತಿಯೊಬ್ಬರನ್ನು ಹಣಕ್ಕಾಗಿ ಬ್ಲ್ಯಾಕ್​ಮೇಲ್

ವಿಡಿಯೋ ಕಾಲ್ ಮಾಡಿ ಅಶ್ಲೀಲ ಕೃತ್ಯಗಳನ್ನು ಎಸಗುವಂತೆ ಮಾಡಿದ ಮಹಿಳೆಯೊಬ್ಬಳು ಅದೇ ವಿಡಿಯೊ ಇಟ್ಟುಕೊಂಡು ವ್ಯಕ್ತಿಯೊಬ್ಬರನ್ನು ಹಣಕ್ಕಾಗಿ ಬ್ಲ್ಯಾಕ್​ಮೇಲ್ ಮಾಡಿದ ಘಟನೆ ಡೆಹ್ರಾಡೂನ್​ನಲ್ಲಿ ನಡೆದಿದೆ. ದುಷ್ಕರ್ಮಿಗಳ ಬೆದರಿಕೆಗೆ ಹೆದರಿದ ವ್ಯಕ್ತಿ ಸುಮಾರು 4 ಲಕ್ಷ ರೂಪಾಯಿ ಹಣ ಪಾವತಿಸಿದ್ದಾನೆ.

ಅಶ್ಲೀಲ ವೀಡಿಯೊ ವೈರಲ್ ಮಾಡ್ತೀವಿ ಎಂದು 4 ಲಕ್ಷ ರೂ. ಕಿತ್ತ ದುಷ್ಕರ್ಮಿಗಳು!
man-ends-up-paying-money-in-sextortion-scam

By

Published : Jan 12, 2023, 5:28 PM IST

Updated : Jan 12, 2023, 9:08 PM IST

ಡೆಹ್ರಾಡೂನ್ (ಉತ್ತರಾಖಂಡ): ಡೆಹ್ರಾಡೂನ್‌ನ ವ್ಯಕ್ತಿಯೊಬ್ಬರಿಗೆ ಅಪರಿಚಿತ ಮಹಿಳೆಯೊಬ್ಬರು ವಿಡಿಯೋ ಕಾಲ್ ಮಾಡಿ, ಕಾಲ್​​ನಲ್ಲಿ ಅಶ್ಲೀಲ ಕೃತ್ಯಗಳನ್ನು ಎಸಗಲು ಪ್ರೇರೇಪಿಸಿದ್ದಾರೆ. ನಂತರ ಅದೇ ವಿಡಿಯೋ ಇಟ್ಟುಕೊಂಡು ಹಣಕ್ಕಾಗಿ ಸೆಕ್ಸ್‌ಟಾರ್ಶನ್ (ಬ್ಲ್ಯಾಕ್‌ಮೇಲ್) ಮಾಡಿದ ಘಟನೆ ಬೆಳಕಿಗೆ ಬಂದಿದೆ. ಡೆಹ್ರಾಡೂನ್‌ನ ವಿವೇಕಾನಂದ ಕಾಲೋನಿಯ ನಿವಾಸಿಯಾಗಿರುವ ವ್ಯಕ್ತಿಯೊಬ್ಬರು ಈ ಕುರಿತು ದೂರು ದಾಖಲಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್ 6 ರಂದು ತನಗೆ ಅಪರಿಚಿತ ಸಂಖ್ಯೆಯಿಂದ ವೀಡಿಯೊ ಕರೆ ಬಂದಿದೆ. ಮಹಿಳೆಯೊಬ್ಬಳು ನನಗೆ ಅಶ್ಲೀಲ ವೀಡಿಯೊ ಕರೆ ಮಾಡಿದ್ದರು. ನಂತರ ಹಣ ಕೇಳುವ ದುಷ್ಟರ ಕೂಟದಿಂದ ನನಗೆ ಕರೆ ಬರಲಾರಂಭಿಸಿವೆ. ಅವರ ಬೇಡಿಕೆಗಳನ್ನು ಪೂರೈಸದಿದ್ದರೆ ರೆಕಾರ್ಡ್ ಮಾಡಿದ ವೀಡಿಯೊ ಕರೆಯನ್ನು ವೈರಲ್ ಮಾಡಲಾಗುವುದು ಎಂದು ಹೇಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.

ಒಂದು ಕಾಲ್ ಬಂದ ನಂತರ ಸಂತ್ರಸ್ತ ವ್ಯಕ್ತಿಗೆ ಮರುದಿನ ಮತ್ತೊಂದು ಅಪರಿಚಿತ ಸಂಖ್ಯೆಯಿಂದ ಮತ್ತೊಂದು ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿಯು ತನ್ನನ್ನು ದೆಹಲಿಯ ಪ್ರೀತಂಪುರ ಪೊಲೀಸ್ ಠಾಣೆಯ ಎಸ್‌ಎಚ್‌ಒ ಎಂದು ಪರಿಚಯಿಸಿಕೊಂಡಿದ್ದಾನೆ. ಮಹಿಳೆಯೊಂದಿಗೆ ಇರುವ ಅಶ್ಲೀಲ ವಿಡಿಯೋ ಪತ್ತೆಯಾಗಿದೆ ಎಂದು ವ್ಯಕ್ತಿಗೆ ಬೆದರಿಕೆ ಹಾಕಿದ್ದಾನೆ. ವಿಡಿಯೋವನ್ನು ಡಿಲೀಟ್​ ಮಾಡಲು ಬಯಸಿದರೆ ಯುಟ್ಯೂಬ್ ಅಧಿಕಾರಿ ಸಂದೀಪ್ ಎಂಬುವರನ್ನು ಸಂಪರ್ಕಿಸಬೇಕು. ಒಂದು ವೇಳೆ ವಿಡಿಯೋ ಡಿಲೀಟ್ ಮಾಡದಿದ್ದಲ್ಲಿ ನಿಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಸಂತ್ರಸ್ತ ವ್ಯಕ್ತಿಗೆ ಆತ ಬೆದರಿಸಿದ್ದಾನೆ.

ಈ ಎಲ್ಲ ಘಟನಾವಳಿಯಿಂದ ಭಯಭೀತನಾದ ಸಂತ್ರಸ್ತ ವ್ಯಕ್ತಿಯು ವಿಡಿಯೋವನ್ನು ಅಳಿಸಲು ಯೂಟ್ಯೂಬ್ ಅಧಿಕಾರಿಯನ್ನು ಸಂಪರ್ಕಿಸಿದ್ದಾನೆ. ಆದರೆ, ಆ ಕಡೆಯ ವ್ಯಕ್ತಿಯು ವಿಡಿಯೋ ಡಿಲೀಟ್​ ಮಾಡಬೇಕಾದರೆ ಹಣ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾನೆ. ಕೊನೆಗೆ ಹಣ ನೀಡಲು ಸಂತ್ರಸ್ತ ಒಪ್ಪಿಕೊಂಡಿದ್ದಾನೆ. ಸಂತ್ರಸ್ತ ವ್ಯಕ್ತಿಯು ಆರಂಭದಲ್ಲಿ ದುಷ್ಕರ್ಮಿಗಳು ನೀಡಿದ ಬ್ಯಾಂಕ್ ಖಾತೆ ಸಂಖ್ಯೆಗೆ 22,500 ರೂ. ಜಮೆ ಮಾಡಿದ್ದಾನೆ. ಆದರೂ ಹಣಕ್ಕಾಗಿ ದುಷ್ಕರ್ಮಿಗಳು ಪೀಡಿಸಿದ್ದರಿಂದ ಮತ್ತೆ 4,53,000 ರೂ. ಜಮೆ ಮಾಡಿದ್ದಾನೆ. ಇಷ್ಟಾದ ಮೇಲೂ ದುಷ್ಟರಕೂಟದ ಕಿರುಕುಳ ತಪ್ಪದ ಕಾರಣ ಆತ ಅನಿವಾರ್ಯವಾಗಿ ಪೊಲೀಸರಿಗೆ ದೂರು ನೀಡಿದ್ದಾನೆ.

ಪ್ರಕರಣದ ಕುರಿತು ನೆಹರು ಕಾಲೋನಿ ಠಾಣೆಯ ಪ್ರಭಾರ ಅಧಿಕಾರಿ ಲೋಕೇಂದ್ರ ಬಹುಗುಣ ಮಾತನಾಡಿ, ಸಂತ್ರಸ್ತ ಪುರುಷ ನೀಡಿದ ದೂರಿನ ಮೇರೆಗೆ ಅಪರಿಚಿತ ತಂಡದ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಸಂತ್ರಸ್ತನ ಮೊಬೈಲ್‌ಗೆ ಬಂದಿರುವ ಕರೆಗಳು ಮತ್ತು ಹಣ ಜಮೆ ಮಾಡಿಸಿಕೊಂಡ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಅಶ್ಲೀಲ ವಿಡಿಯೋ ಅಥವಾ ಕೃತ್ಯದ ಸಾಕ್ಷಿಗಳನ್ನು ಇಟ್ಟುಕೊಂಡು ಬ್ಲ್ಯಾಕ್​ಮೇಲ್ ಮಾಡುವುದನ್ನು ಇಂಗ್ಲಿಷ್​ನಲ್ಲಿ ಸೆಕ್ಸ್‌ಟಾರ್ಶನ್ ಎನ್ನಲಾಗುತ್ತದೆ. ಸೆಕ್ಸ್‌ಟಾರ್ಶನ್ ಇದು ದುರುದ್ದೇಶಪೂರಿತ ಆನ್‌ಲೈನ್ ಅಪರಾಧವಾಗಿದ್ದು, ಸೈಬರ್ ಅಪರಾಧಿಗಳು ಖಾಸಗಿ, ಸೂಕ್ಷ್ಮ ಮತ್ತು ಲೈಂಗಿಕವಾಗಿ ತೇಜೋವಧೆ ಮಾಡುವಂಥ ವಸ್ತುಗಳನ್ನು ಅಥವಾ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಾರೆ. ಆ ಮೂಲಕ ಅವರು ಸಂತ್ರಸ್ತರಿಂದ ಹಣ ಕೀಳುತ್ತಾರೆ. ಸಾಮಾನ್ಯವಾಗಿ 45 ರಿಂದ 60 ವರ್ಷ ವಯಸ್ಸಿನ ಶ್ರೀಮಂತ ಪುರುಷರನ್ನು ಗುರಿಯಾಗಿಸಿಕೊಂಡು ಇಂಥ ಕೃತ್ಯಗಳು ನಡೆಯುತ್ತವೆ.

ಇದನ್ನೂ ಓದಿ:ಮದ್ಯ ಕುಡಿಸಿ ಅಶ್ಲೀಲ ಫೋಟೋ, ವಿಡಿಯೋ ತೆಗೆದು ಬ್ಲಾಕ್​ ಮೇಲ್​: ಯುವತಿ ವಿರುದ್ಧ ಯುವಕನ ದೂರು..!

Last Updated : Jan 12, 2023, 9:08 PM IST

ABOUT THE AUTHOR

...view details