ಪುಣೆ(ಮಹಾರಾಷ್ಟ್ರ):ಅಮೆರಿಕದ ಪ್ರಮುಖ ಏಜೆನ್ಸಿಯಾದ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ)ಗೆ ರೈಸ್ ಪುಲ್ಲರ್ ಯಂತ್ರಗಳನ್ನು ಮಾರಾಟ ಮಾಡುವ ನೆಪದಲ್ಲಿ ಸುಮಾರು 100 ಜನರಿಗೆ ಒಟ್ಟು 6 ಕೋಟಿ ರೂ. ವಂಚಿಸಿದ ಆರೋಪದ ಮೇಲೆ ಪುಣೆಯಲ್ಲಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ನಾಲ್ವರ ವಿರುದ್ಧ ಎಫ್‌ಐಆರ್: ಈ ಸಂಬಂಧ ಹಡಪ್ಸರ್ ನಿವಾಸಿ ಬಾಬಾಸಾಹೇಬ್ ಸೋನಾವಾನೆ (50) ಮಂಗಳವಾರ ಬಂಡ್‌ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ರಾಮ್ ಗಾಯಕ್ವಾಡ್, ರಾಮಚಂದ್ರ ವಾಘಮಾರೆ, ಸಂತೋಷ್ ಸಪ್ಕಲ್ ಮತ್ತು ರಾಹುಲ್ ಜಾಧವ್ ಎಂದು ಗುರುತಿಸಲಾದ ನಾಲ್ವರು ಶಂಕಿತರ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 406, 420, 467, 468, 471, 120 ಬಿ, 34 ಮತ್ತು ಮಹಾರಾಷ್ಟ್ರ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಅನೇಕರಿಗೆ ಆಮಿಷ:ಪೊಲೀಸರ ಪ್ರಕಾರ, ಜೂನ್ 2018 ರಿಂದ, ಆರೋಪಿಗಳು ನಾಸಾಗೆ "ರೈಸ್ ಪುಲ್ಲರ್ ಯಂತ್ರ"ಗಳನ್ನು ಮಾರಾಟ ಮಾಡುವ ವ್ಯವಹಾರದಲ್ಲಿ ಹೂಡಿಕೆ ಮಾಡುವಂತೆ ಅನೇಕ ಜನರಿಗೆ ಆಮಿಷವೊಡ್ಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಇದರಿಂದ ಬೃಹತ್ ಆದಾಯ ಸಿಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಈ ಉದ್ದೇಶಕ್ಕಾಗಿ ನಾಸಾದ ಸಂಶೋಧಕರು ಭಾರತಕ್ಕೆ ಬರಲಿದ್ದಾರೆ ಎಂದು ಆರೋಪಿಗಳು ಹೇಳಿಕೊಂಡಿದ್ದರು. ಅಲ್ಲದೇ ಪುಣೆ ರೈಲ್ವೆ ನಿಲ್ದಾಣದ ಬಳಿಯ ಸಾಧು ವಾಸ್ವಾನಿ ಚೌಕ್ ಪ್ರದೇಶದ ಹೋಟೆಲ್‌ನಲ್ಲಿ ಹೂಡಿಕೆದಾರರೊಂದಿಗೆ ಸಭೆ ಸಹ ನಡೆಸಿದ್ದರು.