ಗುರುಗ್ರಾಮ:ಹರಿಯಾಣದ ಕರ್ನಾಲ್ ಜಿಲ್ಲೆಯಲ್ಲಿ ಮಂಗಳವಾರವಷ್ಟೇ ಯುವಕರು ರೀಲ್ಸ್ ಮಾಡುವ ಹುಚ್ಚಿಗೆ ಮಹಿಳೆಯರ ಮೇಲೆ ಕಾರು ಹರಿಸಿ ಕೊಂದ ಘಟನೆ ನಡೆದಿತ್ತು. ಇದೀಗ ಗುರುಗ್ರಾಮದಲ್ಲಿ ಚಲಿಸುವ ಕಾರಿನ ಮೇಲೆ ಯುವಕನೊಬ್ಬ ಪುಷ್ಅಪ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಪೊಲೀಸರು ಇದನ್ನು ಗಮನಿಸಿ ಕಾರಿನ ಮಾಲೀಕನಿಗೆ ದಂಡ ಹಾಕಿದ್ದಾರೆ.
ವಾಹನ ದಟ್ಟಣೆ ಇರುವ ರಸ್ತೆಯ ಮೇಲೆ ಕಾರು ಚಲಿಸುತ್ತಿರುವಾಗಲೇ ಯುವಕರು ಈ ಹುಚ್ಚಾಟ ಮೆರೆದಿದ್ದಾರೆ. ನಾಲ್ವರು ಕಾರಿನ ಕಿಟಕಿಗಳಿಂದ ದೇಹವನ್ನು ಹೊರಹಾಕಿ ನಿಂತಿದ್ದರೆ, ಇನ್ನೊಬ್ಬ ಮೇಲೆ ಹತ್ತಿ ಪುಷ್ಅಪ್ಸ್ ಮಾಡುತ್ತಿದ್ದಾನೆ. ಇದನ್ನು ಬೇರೊಂದು ಕಾರಿನಲ್ಲಿದ್ದವರು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ವೈರಲ್ ಆಗಿದ್ದಲ್ಲದೇ, ಹರಿಯಾಣ ಪೊಲೀಸರ ಕಣ್ಣಿಗೆ ಬಿದ್ದಿದೆ. ತಕ್ಷಣವೇ ಕ್ರಮ ಕೈಗೊಂಡು ಕಾರಿನ ಮಾಲೀಕನಿಗೆ 6,500 ಸಾವಿರ ರೂಪಾಯಿ ದಂಡದ ಚಲನ್ ಕಳುಹಿಸಿದ್ದಾರೆ.
ಓರ್ವನ ಬಂಧನ:ಘಟನೆಗೆ ಸಂಬಂಧಿಸಿದಂತೆ ಪುಷ್ ಅಪ್ಸ್ ಮಾಡುತ್ತಿದ್ದ ವ್ಯಕ್ತಿಯನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಘಟನೆಯ ಎರಡು ವಿಡಿಯೋಗಳು ಸಿಕ್ಕಿದ್ದು, ಒಂದರಲ್ಲಿ ಕಾರಿನ ಮೇಲೆ ಕುಳಿತು ಮದ್ಯಪಾನ ಮಾಡುತ್ತಿದ್ದರೆ,ಇನ್ನೊಂದು ಪುಷ್ಅಪ್ಸ್ ಮಾಡಲಾಗುತ್ತಿದೆ. ವಾಹನದ ಮೇಲೆ ಕುಳಿತಿರುವ ವ್ಯಕ್ತಿಯು ಬಾಟಲಿಯನ್ನು ಹಿಡಿದಿರುವುದು ವಿಡಿಯೋದಲ್ಲಿದೆ.
"ರಸ್ತೆ ನಿಯಮ ಉಲ್ಲಂಘಿಸಿ ಉದ್ದಟನನ ಮೆರೆದ ಯುವಕರ ವಿರುದ್ಧ ಕ್ರಮ ಜರುಗಿಸಲಾಗಿದೆ. ಪುಂಡಾಟ ನಡೆಸಿದ್ದಕ್ಕಾಗಿ ಕಾರಿನ ಮಾಲೀಕರಿಗೆ 6,500 ರೂಪಾಯಿ ದಂಡ ವಿಧಿಸಲಾಗಿದೆ. ನಿಮ್ಮ ಹುಚ್ಚಾಟದಿಂದಾಗಿ ಇತರರ ಪ್ರಾಣಕ್ಕೆ ಅಪಾಯವನ್ನುಂಟು ಮಾಡದಂತೆ ಎಲ್ಲಾ ವಾಹನ ಸವಾರರಲ್ಲಿ ವಿನಂತಿಸುತ್ತೇವೆ" ಎಂದು ನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ.
ಅಕ್ರಮಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಲೋಕೇಶ್ ಎಂಬಾತನನ್ನೂ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಕ್ಷಿಪ್ರ ಕ್ರಮ ಕೈಗೊಂಡಿದ್ದಾರೆ. ರಸ್ತೆಗಳಲ್ಲಿ ಈ ರೀತಿಯ ಕೃತ್ಯವನ್ನು ಎಂದಿಗೂ ಸಹಿಸುವುದಿಲ್ಲ ಎಂದು ಸಂಚಾರ ವಿಭಾಗದ ಡಿಸಿಪಿ ವೀರೇಂದ್ರ ವಿಜ್ ಹೇಳಿದ್ದಾರೆ. ಈ ಸಂಬಂಧ ಡಿಎಲ್‌ಎಫ್ 3ನೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.
ಉತ್ತರ ಪ್ರದೇಶದಲ್ಲಿ ನಡೆದ ಘಟನೆ:ಈ ಹಿಂದೆ ಉತ್ತರಪ್ರದೇಶದಲ್ಲಿ ಚಲಿಸುವ ಕಾರಿನ ಮೇಲೆ ವ್ಯಕ್ತಿಯೋರ್ವ ಅಪಾಯಕಾರಿಯಾಗಿ ಪುಷ್ ಅಪ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಯುವಕನಿಗೆ ಎಚ್ಚರಿಕೆ ನೀಡಿದ್ದರು. ಘಟನೆ ಬಳಿಕ ಯುವಕ ಕೂಡ ಕ್ಷಮೆ ಯಾಚಿಸಿದ್ದ.
ಉಜ್ವಾಲ್ ಯಾದವ್ ಎನ್ನುವ ವ್ಯಕ್ತಿ ಈ ಅಪಾಯಕಾರಿ ಸ್ಟಂಟ್ ಮಾಡಿದ್ದ. ರಸ್ತೆಯ ಮೇಲೆ ವಾಹನ ಚಲಿಸುತ್ತಿದ್ದಾಗಲೇ ಯಾದವ್ ಕಾರ್ ಡೋರ್ ತೆಗೆದು ಅದರ ಮೇಲೆ ಹತ್ತಿ ಪುಷ್‌ಅಪ್ ಮಾಡಿದ್ದ. ಇದನ್ನು ವಿಡಿಯೋ ಮಾಡಿ ಹಂಚಿಕೊಳ್ಳಲಾಗಿತ್ತು. ವಿಡಿಯೋವನ್ನು ಕೆಲವರು ಪ್ರಶಂಸಿದರೆ, ಪೊಲೀಸರು ಕೇಸ್ ಜಡಿದಿದ್ದರು. ಯುವಕನನ್ನು ವಶಕ್ಕೆ ಪಡೆದು ಈ ರೀತಿಯ ಘಟನೆ ಮರುಕಳಿಸಿದಂತೆ ಎಚ್ಚರಿಕೆ ನೀಡಿ ಬಿಟ್ಟಿದ್ದರು.
ಉಜ್ವಾಲ್ ಯಾದವ್ ಮತ್ತೊಂದು ಕ್ಲಿಪ್ನಲ್ಲಿ ಕ್ಷಮೆಯಾಚಿಸಿದ್ದ. ಕಾರಿನೊಂದಿಗೆ ಅಪಾಯಕಾರಿ ವಿಡಿಯೋವನ್ನು ಮಾಡಿದ್ದೇನೆ. ಭವಿಷ್ಯದಲ್ಲಿ ನಾನು ಇದನ್ನು ಎಂದಿಗೂ ಮಾಡುವುದಿಲ್ಲ ಎಂದು ಹೇಳಿದ್ದ. ಇದರ ಕ್ಲಿಪ್ ಹಂಚಿಕೊಂಡ ಉತ್ತರಪ್ರದೇಶ ಪೊಲೀಸರು, “ಡ್ರೈವಿಂಗ್ ಮಾಡುವಾಗ ಸಾಹಸವನ್ನು ಮಾಡುವುದು ಶಿಕ್ಷಾರ್ಹ ಅಪರಾಧ. ಇದು ನಿಮಗೆ ಮತ್ತು ನಿಮ್ಮ ಸುತ್ತಮುತ್ತಲಿನ ಇತರರಿಗೆ ಹಾನಿಕಾರಕವಾಗಿದೆ" ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ:ಲವ್‌ನಲ್ಲಿ ಬಿದ್ದ 45ರ ಶಿಕ್ಷಕಿ: ಮಿಸ್ಡ್ ಕಾಲ್ ಪ್ರೇಮ ಇಬ್ಬರ ಆತ್ಮಹತ್ಯೆಯಲ್ಲಿ ಅಂತ್ಯ!