ಚಂಡೀಗಢ :ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯಲ್ಲಿ ಭಾನುವಾರ ಆಯೋಜಿಸಿದ್ದ ಗ್ರಾಮೀಣ ಕ್ರೀಡಾ ಸ್ಪರ್ಧೆಯಲ್ಲಿ ಅವಘಡವೊಂದು ನಡೆದಿದೆ. ಟ್ರ್ಯಾಕ್ಟರ್ ಮೂಲಕ ಸಾಹಸ ಪ್ರದರ್ಶಿಸುತ್ತಿದ್ದ ಸ್ಟಂಟ್ ಮ್ಯಾನ್ ಅದೇ ಟ್ರ್ಯಾಕ್ಟರ್ ಕೆಳಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವರದಿಗಳ ಪ್ರಕಾರ, ಟೇಟ್ ಗ್ರಾಮದ ಸುಖಮನ್‌ದೀಪ್ ಸಿಂಗ್ (29) ಟ್ರ್ಯಾಕ್ಟರ್‌ನಲ್ಲಿ ಸಾಹಸ ಮಾಡಲು ಹೋಗಿ ಪ್ರಾಣ ಕಳೆದುಕೊಂಡಾತ. ಟ್ರ್ಯಾಕ್ಟರ್ ಸ್ಟಂಟ್ನಲ್ಲಿ ಇವರು ನಿಸ್ಸೀಮರು. ಇವರ ಹಲವು ಸ್ಟಂಟ್ಗಳು ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾಗಿ ಪ್ರಸಿದ್ಧಿ ಪಡೆದಿವೆ. ಆದರೆ, ದುರಾದೃಷ್ಟವಶಾತ್ ಅವರ ಸ್ಟಂಟೇ ಪ್ರಾಣಕ್ಕೆ ಎರವಾಗಿದೆ. ಸುಖಮನ್‌ದೀಪ್ ಅವರ ಪತ್ನಿ ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಒಬ್ಬ ಪುತ್ರನಿದ್ದಾನೆ.
ಘಟನೆಯ ವಿವರ:ಗುರುದಾಸ್‌ಪುರ ಜಿಲ್ಲೆಯ ಫತೇಘರ್ ಚುರಿಯನ್ ಕ್ಷೇತ್ರದ ಸರ್ಚುರ್ ಗ್ರಾಮದಲ್ಲಿ ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲಿಗೆ ಸ್ಟಂಟ್ಮ್ಯಾನ್ ಸುಖಮನ್ ಸಿಂಗ್ ತೆರಳಿದ್ದರು. ತನ್ನ ಸರದಿಯ ವೇಳೆ ಸುಖಮನ್ ತಮ್ಮ ಟ್ರ್ಯಾಕ್ಟರ್‌ನ ಮುಂಭಾಗದ ಚಕ್ರಗಳನ್ನು ಗಾಳಿಯಲ್ಲಿ ಮೇಲಕ್ಕೆತ್ತಿ ಸಾಹಸ ಪ್ರದರ್ಶನ ನೀಡುತ್ತಿದ್ದರು. ಅಚಾನಕ್ಕಾಗಿ ಟ್ರ್ಯಾಕ್ಟರ್ ತಲೆಕೆಳಗಾಗಿ ನಿಂತಿತು. ತಕ್ಷಣವೇ ಅವರು ಟ್ರ್ಯಾಕ್ಟರ್ನಿಂದ ಕೆಳಗಿಳಿದಿದ್ದಾರೆ.
ಆನ್ನಲ್ಲಿ ಇದ್ದ ಟ್ರ್ಯಾಕ್ಟರ್ ಚಕ್ರಗಳು ಸುತ್ತುತ್ತಲೇ ಇದ್ದವು. ಸುಖಮನ್ ಸಿಂಗ್ ವಾಹನವನ್ನು ನಿಲ್ಲಿಸಲೆಂದು ಪ್ರಯತ್ನಿಸುತ್ತಿರುವಾಗ, ಅದರ ಟೈಯರ್ಗಳನ್ನು ಹಿಡಿದುಕೊಂಡಿದ್ದಾರೆ. ಈ ವೇಳೆ ನಿಯಂತ್ರಣ ತಪ್ಪಿ ಹಿಂಬದಿಯ ಚಕ್ರಗಳ ಕೆಳಗೆ ಬಿದ್ದಿದ್ದಾರೆ. ಟ್ರ್ಯಾಕ್ಟರ್ ಹಿಮ್ಮುಖವಾಗಿ ಚಲಿಸುತ್ತಲೇ ಸಾಗಿದೆ. ಇದರಿಂದ ಸ್ಟಂಟ್ಮ್ಯಾನ್ ಅದರಡಿ ಸಿಲುಕಿದ್ದಾರೆ. ತಕ್ಷಣ ಸುತ್ತಮುತ್ತಲಿನ ಜನರು ಆತನನ್ನು ಹೊರಗೆಳೆಯಲು ಯತ್ನಿಸಿದರು. ಆದರೆ, ವೇಗವಾಗಿ ಚಲಿಸುತ್ತಿದ್ದ ಟ್ರ್ಯಾಕ್ಟರ್ ಸುಖಮನ್ ಸಿಂಗ್ರ ಮೇಲೆ ಹರಿದಿದ್ದರಿಂದ ಗಂಭೀರವಾಗಿ ಗಾಯಗೊಂಡರು. ತಕ್ಷಣ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ, ವೈದ್ಯರು ಮೃತಪಟ್ಟಿದ್ದಾಗಿ ಘೋಷಿಸಿದರು.
ಸುಖಮನ್ ಸಿಂಗ್ ಮೃತಪಟ್ಟ ಹಿನ್ನೆಲೆಯಲ್ಲಿ ಉಳಿದ ಕ್ರೀಡಾ ಸ್ಪರ್ಧೆಗಳನ್ನು ಆಯೋಜಕರು ರದ್ದುಗೊಳಿಸಿದರು. ಖಾಸಗಿ ಕಾರ್ಯಕ್ರಮವೊಂದರಲ್ಲಿ ಈ ಘಟನೆ ನಡೆದಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಗುರುದಾಸ್‌ಪುರ ಜಿಲ್ಲಾಧಿಕಾರಿ ಹಿಮಾಂಶು ಅಗರ್ವಾಲ್ ತಿಳಿಸಿದ್ದಾರೆ. ಈ ಕಾರ್ಯಕ್ರಮ ನಡೆಸಲು ಆಯೋಜಕರು ಯಾವುದೇ ಪೂರ್ವಾನುಮತಿ ಪಡೆದಿರಲಿಲ್ಲ. ಸರಿಯಾದ ಸುರಕ್ಷತಾ ಮಾನದಂಡಗಳನ್ನು ಅನುಸರಿಸುವವರಿಗೆ ಮಾತ್ರ ಇಂತಹ ಸಾಹಸ ಕ್ರೀಡೆಗಳಿಗೆ ಪರವಾನಗಿ ನೀಡಲಾಗುವುದು ಎಂದು ಅವರು ಹೇಳಿದರು.
ಇದನ್ನೂ ಓದಿ:5 ವರ್ಷದಿಂದ ರೋಗಿಯ ಉದರೊಳಗಿರುವ ಚಾಕು.. ಹೊಟ್ಟೆ ನೋವು ಪರೀಕ್ಷೆ ವೇಳೆ ದಂಗಾದ ವೈದ್ಯರು!