ಗೋರಖ್‌ಪುರ: ಬಿಹಾರದಿಂದ ಹೊರಟಿದ್ದ ಗೋರಖ್‌ಪುರ - ನರ್ಕಟಿಯಾಗಂಜ್ ಪ್ಯಾಸೆಂಜರ್ನ ಮಹಿಳಾ ಬೋಗಿಯಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗೋರಖ್‌ಪುರ ನಿಲ್ದಾಣದಲ್ಲಿ ರೈಲು ನಿಂತ ವೇಳೆ ಈ ಘಟನೆ ನಡೆದಿದೆ. ಸೋಮವಾರ ತಡರಾತ್ರಿ, ಪ್ಲಾಟ್‌ಫಾರ್ಮ್ ಪ್ರಯಾಣಿಕರಿಂದ ತುಂಬಿ ತುಳುಕುತ್ತಿತ್ತು. ಈ ವೇಳೆಯೇ ಯುವಕ ಮಹಿಳೆಯ ಬೋಗಿಯೊಂದರ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ಯಾನ್ನಲ್ಲಿ ನೇತಾಡುತ್ತಿದ್ದ ಶವ ನೋಡಿದ ಮಹಿಳೆಯರು ಕಿರುಚಿದ್ದಾರೆ. ಇದರಿಂದಾಗಿ ಕೆಲಕಾಲ ಕೋಲಾಹಲ ಉಂಟಾದ ಘಟನೆಯೂ ನಡೆದಿದೆ.
ಯುವಕ ಯಾರು, ಎಲ್ಲಿಂದ ಬಂದಿದ್ದ, ಎಲ್ಲಿಗೆ ಹೋಗುತ್ತಿದ್ದ ಎಂಬ ಬಗ್ಗೆ ರೈಲ್ವೆ ಇಲಾಖೆಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. RPF ಈ ಸಂಬಂಧ ತನಿಖೆ ಕೈಗೊಂಡಿದೆ. ಈ ಘಟನೆ ಅತ್ಯಂತ ಆಘಾತಕಾರಿಯಾಗಿದೆ. ಈ ಯುವಕ ಮಹಿಳಾ ಬೋಗಿಯೊಳಗೆ ಸೇರಿಕೊಂಡಿದ್ದು ಹೇಗೆ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ. ಗೋರಖ್‌ಪುರದಿಂದ ಸಿವಾನ್ ಮೂಲಕ ನರ್ಕಟಿಯಾಗಂಜ್‌ಗೆ ಹೋಗುತ್ತಿದ್ದ ರೈಲಿನಲ್ಲಿ ಈ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ವಯಸ್ಸು ಸುಮಾರು 40 ಎಂದು ವರದಿಯಾಗಿದೆ.
ಆರ್‌ಪಿಎಫ್ ಮತ್ತು ಜಿಆರ್‌ಪಿ ಪಡೆಗಳು ಶವವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ರವಾನಿಸಿವೆ. ಆತ್ಮಹತ್ಯೆಗೆ ಕಾರಣ ಏನು ಎಂಬುದು ಕೂಡಾ ತಿಳಿದುಬಂದಿಲ್ಲ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಬ್ಯಾಗ್ ಅಥವಾ ಯಾವುದೇ ಗುರುತಿನ ಚೀಟಿಯೂ ಪತ್ತೆಯಾಗಿಲ್ಲ, ಆದ್ದರಿಂದ ಅವರ ಗುರುತು ಕೂಡ ಆರ್‌ಪಿಎಫ್‌ಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಆತ್ಮಹತ್ಯೆ ಘಟನೆಯ ನಂತರ, ರೈಲು ಸುಮಾರು ಮೂರು ಗಂಟೆಗಳ ಕಾಲ ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿತ್ತು, ಇದರಿಂದಾಗಿ ಅಲ್ಲಿದ್ದ ಪ್ರಯಾಣಿಕರಲ್ಲಿ ಸಹ ಭೀತಿ ಆವರಿಸಿತ್ತು.