ಬಹದ್ದೂರ್‌ಗಢ(ಹರಿಯಾಣ):ರೈತರ ಆಂದೋಲನದ ವೇಳೆ ಯುವಕನೊಬ್ಬನಿಗೆ ಮದ್ಯ ಕುಡಿಸಿ ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ಹರಿಯಾಣದ ಬಹದ್ದೂರ್ಗಢನಲ್ಲಿ ನಡೆದಿದೆ. ಬುಧವಾರ ಸಂಜೆ ಈ ಘಟನೆ ನಡೆದಿದೆ. ಮುಖೇಶ್ ಎಂಬ ಯುವಕ ನಾಲ್ವರೊಂದಿಗೆ ಸೇರಿ ಮದ್ಯ ಸೇವನೆ ಮಾಡಿದ್ದು, ಇದಾದ ಬಳಿಕ ಅವರವರ ಮಧ್ಯೆ ವಾಗ್ವಾದ ನಡೆದಿದೆ. ಇದೇ ವೇಳೆ ಆತನಿಗೆ ಬೆಂಕಿ ಹಚ್ಚಲಾಗಿದೆ ಎಂದು ತಿಳಿದು ಬಂದಿದೆ.
ಹರಿಯಾಣದ ಬಹದ್ದೂರ್ಗಢನಲ್ಲಿ ಕಳೆದ ಕೆಲ ದಿನಗಳಿಂದ ರೈತರ ಆಂದೋಲನ ನಡೆಯುತ್ತಿದ್ದು, ಈ ವೇಳೆ ಇಂತಹ ಅಮಾನವೀಯ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಮೃತ ವ್ಯಕ್ತಿಯನ್ನ ಕಸರ್ ಗ್ರಾಮದ ನಿವಾಸಿಯಾಗಿರುವ ಮುಖೇಶ್ ಎಂದು ಗುರುತಿಸಲಾಗಿದೆ. ಆತನಿಗೆ ಬೆಂಕಿ ಹಚ್ಚಿದ ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಶೇ.90ರಷ್ಟು ಸುಟ್ಟು ಹೋದ ಕಾರಣ ಚಿಕಿತ್ಸೆ ಫಲಕಾರಿಯಾಗಿಲ್ಲ. ಮುಖೇಶ್ ಸಾವಿನ ನಂತರ ಆತನ ಸಂಬಂಧಿಕರು ಮತ್ತು ಗ್ರಾಮಸ್ಥರು ಆಂದೋಲನ ನಡೆಸುತ್ತಿರುವ ರೈತರ ವಿರುದ್ಧ ಅನೇಕ ರೀತಿಯ ಆರೋಪ ಮಾಡಿದ್ದಾರೆ.