ಗಾಜಿಯಾಬಾದ್ (ಉತ್ತರ ಪ್ರದೇಶ): ಪಾರ್ಕಿಂಗ್ ವಿಚಾರಕ್ಕೆ ನಡೆದ ಗಲಾಟೆಯು ಓರ್ವ ಕೊಲೆಯಲ್ಲಿ ಅಂತ್ಯವಾದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆಯಿತು. ಮೃತನನ್ನು 35 ವರ್ಷದ ವರುಣ್ ಎಂದು ಗುರುತಿಸಲಾಗಿದೆ.
ಇಲ್ಲಿನ ತೀಲಾ ಮೋರ್ ಪ್ರದೇಶದಲ್ಲಿ ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಉಪಹಾರ ಗೃಹದ ಮುಂದೆ ಈ ಘಟನೆ ಜರುಗಿದೆ. ವರುಣ್ ತಮ್ಮ ಕಾರನ್ನು ಪಾರ್ಕ್ ಮಾಡಿದ್ದರು. ಇದರ ಪಕ್ಕದಲ್ಲೇ ಮತ್ತೊಂದು ಕಾರು ಪಾರ್ಕ್ ಮಾಡಲಾಗಿತ್ತು. ಆದರೆ, ಈ ಎರಡು ಕಾರುಗಳ ಮಧ್ಯೆ ಡೋರ್ ಓಪನ್ ಮಾಡಲು ಸಾಧ್ಯವಾಗದಷ್ಟು ಕಡಿಮೆ ಅಂತರವಿತ್ತು ಎನ್ನಲಾಗಿದೆ.
ಗಾಜಿಯಾಬಾದ್‌ನಲ್ಲಿ ಕಾರು ಪಾರ್ಕಿಂಗ್ ಗಲಾಟೆ ಇದೇ ವಿಷಯವಾಗಿ ವರುಣ್ ಮತ್ತು ಇನ್ನೋರ್ವ ವ್ಯಕ್ತಿಯ ನಡುವೆ ವಾಗ್ವಾದ ಆರಂಭವಾಗಿ, ವಿಕೋಪಕ್ಕೆ ತಿರುಗಿದೆ. ಈ ವೇಳೆ ಇಟ್ಟಿಗೆಗಳನ್ನು ತೆಗೆದುಕೊಂಡ ಆರೋಪಿಯು ವರುಣ್ ತಲೆಯ ಮೇಲೆ ಎತ್ತಿ ಹಾಕಿದ್ದಾನೆ. ಇದರ ದೃಶ್ಯಗಳು ಸ್ಥಳೀಯರೊಬ್ಬರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿವೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿಯೂ ಹರಿದಾಡುತ್ತಿದೆ.
ಕೊಲೆಯಾದ ವರುಣ್ ನಿವೃತ್ತ ಪೊಲೀಸ್ ಅಧಿಕಾರಿಯ ಮಗ ಎಂದೂ ಹೇಳಲಾಗಿದೆ. ಹೆಚ್ಚುವರಿ ಎಸ್ಪಿ ಜ್ಞಾನೇಂದ್ರ ಕುಮಾರ್ ಸಿಂಗ್ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ತಲೆ ಮರೆಸಿಕೊಂಡಿದ್ದು, ಪತ್ತೆಗಾಗಿ ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಮತ್ತೊಂದೆಡೆ, ಮೃತ ವ್ಯಕ್ತಿಯ ಕುಟುಂಬಸ್ಥರು ಪೊಲೀಸರ ವಿರುದ್ಧ ನಿರ್ಲಕ್ಷ್ಯದ ಆರೋಪ ಮಾಡಿದ್ದು, ಸ್ಥಳೀಯ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆಯನ್ನೂ ನಡೆಸಿದ್ದಾರೆ.
ಇದನ್ನೂ ಓದಿ:ಸ್ಥಳ ಮಹಜರು ವೇಳೆ ಹಲ್ಲೆ ನಡೆಸಿ ಪರಾರಿಗೆ ಯತ್ನ: ಶಿವಮೊಗ್ಗದಲ್ಲಿ ಆರೋಪಿ ಕಾಲಿಗೆ ಗುಂಡೇಟು