ದುಮ್ಕಾ (ಜಾರ್ಖಂಡ್): ತಡರಾತ್ರಿ ಮನೆಯೊಂದರಲ್ಲಿ ಕಳ್ಳತನಕ್ಕೆ ಯತ್ನಿಸಿದ ಶಂಕೆ ಮೇರೆಗೆ ವ್ಯಕ್ತಿಯನ್ನು ಗ್ರಾಮಸ್ಥರು ಹಿಡಿದು ಮರಕ್ಕೆ ಕಟ್ಟಿಹಾಕಿ ಥಳಿಸಿ ಕೊಂದಿರುವ ಘಟನೆ ಜಾರ್ಖಂಡ್ನ ದುಮ್ಕಾ ಜಿಲ್ಲೆಯಲ್ಲಿ ನಡೆದಿದೆ. ಸುರೇಶ್ ಯಾದವ್ ಎಂಬಾತನೇ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಭಾನುವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ತಾಳಜಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಪರ್ಜೋಡ ಗ್ರಾಮಸ್ಥರು ಕಳ್ಳ ಎಂದು ತಿಳಿದು ವ್ಯಕ್ತಿಗೆ ಹೊಡೆದು ಕೊಂದಿದ್ದಾರೆ. ಈ ಮಾಹಿತಿ ತಿಳಿದ ಕೂಡಲೇ ತಲಜಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಘಟನೆಯ ಬಗ್ಗೆ ಮೃತ ವ್ಯಕ್ತಿಯ ಮಗ ಮಾತನಾಡಿದ್ದು, ಮುಂಜಾನೆ 3 ಗಂಟೆ ಸುಮಾರಿಗೆ ತಂದೆಗೆ ಯಾವುದೋ ಅಪರಿಚಿತ ನಂಬರ್ನಿಂದ ಫೋನ್ ಕರೆ ಬಂದಿದೆ. ಬಳಿಕ ಅವರು ಮನೆಯಿಂದ ಹೊರಬಂದಿದ್ದಾರೆ. ಬೆಳಗ್ಗೆ 6 ಗಂಟೆ ಸುಮಾರಿಗೆ ಕೊಲೆ ಆತನ ಬಗ್ಗೆ ನಮಗೆ ಗೊತ್ತಾಗಿದೆ ಎಂದಿದ್ದಾನೆ.
ಇತ್ತೀಚೆಗೆ ಅಕ್ಕಪಕ್ಕದ ಗ್ರಾಮಗಳಲ್ಲಿ ನಿರಂತರವಾಗಿ ಕಳ್ಳತನ ಪ್ರಕರಣ ನಡೆಯುತ್ತಿದ್ದವು. ಇದರಿಂದ ಗ್ರಾಮಸ್ಥರು ಮುನ್ನೆಚ್ಚರಿಕೆಯಿಂದ ಇರುತ್ತಿದ್ದರು. ನಿನ್ನೆ ತಡರಾತ್ರಿ ಗ್ರಾಮದಲ್ಲಿ ಸುರೇಶ್ ಅನುಮಾನಾಸ್ಪದವಾಗಿ ಕಂಡುಬಂದಿದ್ದು, ಮಲಗಿದ್ದ ವ್ಯಕ್ತಿಯೋರ್ವ ಎಚ್ಚರಗೊಂಡು ಕೂಗಿಕೊಂಡಾಗ ಗ್ರಾಮಸ್ಥರು ಜಮಾಯಿಸಿದ್ದಾರೆ. ಬಳಿಕ ಸುರೇಶ್ನನ್ನು ಮರಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದು, ಹಲ್ಲೆ ತೀವ್ರತೆಗೆ ಆತ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಓದಿ:ಅಂತ್ಯಸಂಸ್ಕಾರ ಮಾಡಿದ ಒಂದೇ ದಿನದಲ್ಲಿ ಶವದ ತಲೆ ಬುರುಡೆ ನಾಪತ್ತೆ!