ನವದೆಹಲಿ:ಇಲ್ಲಿನ ಐಜಿಐ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-3 ರ ನಿರ್ಗಮನ ಪ್ರದೇಶದ ಗೇಟ್‌ನಲ್ಲಿ ವ್ಯಕ್ತಿಯೋರ್ವ ಮೂತ್ರ ವಿಸರ್ಜನೆ ಮಾಡಿರುವ ಘಟನೆ ನಡೆದಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ನಿಲ್ದಾಣದ ಟರ್ಮಿನಲ್ ನಿರ್ಗಮನ ಪ್ರದೇಶದ ಗೇಟ್ ಸಂಖ್ಯೆ -6 ರಲ್ಲಿ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಭಾನುವಾರ ಸಂಜೆ 5.30 ರ ಸುಮಾರಿಗೆ ನಮಗೆ ಮಾಹಿತಿ ಬಂದಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.
ಪೊಲೀಸರ ಪ್ರಕಾರ, ಆರೋಪಿ ಜೌಹರ್ ಅಲಿ ಖಾನ್ ಎಂಬಾತ ಸೌದಿ ಅರೇಬಿಯಾದ ದಮಾಮ್‌ಗೆ ತೆರಳಬೇಕಿತ್ತು. ಆತ ನಿಲ್ದಾಣದ ಸಾರ್ವಜನಿಕ ಸ್ಥಳಗಳಲ್ಲಿ ಕಿರುಚುವುದಲ್ಲದೇ, ಜನರನ್ನು ನಿಂದಿಸಿ ತೊಂದರೆ ಉಂಟುಮಾಡುತ್ತಿದ್ದ. ಮಾಹಿತಿ ದೊರೆತ ನಂತರ ಆತನನ್ನು ವಶಕ್ಕೆ ಪಡೆದು ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಪರೀಕ್ಷಿಸಲಾಯಿತು. ಅಲ್ಲಿ ಬಂದ ವರದಿಯಲ್ಲಿ ಆತ ಮದ್ಯ ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸ್ ಉಪ ಆಯುಕ್ತ ರವಿಕುಮಾರ್ ಸಿಂಗ್ ತಿಳಿಸಿದರು. ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 294 (ಅಶ್ಲೀಲ ಕೃತ್ಯ) ಮತ್ತು ಸೆಕ್ಷನ್ 510 (ಸಾರ್ವಜನಿಕವಾಗಿ ದುರ್ವರ್ತನೆ) ಅಡಿಯಲ್ಲಿ ಪ್ರಕರಣವನ್ನು ಐಜಿಐ ವಿಮಾನ ನಿಲ್ದಾಣದಲ್ಲಿ ದಾಖಲಿಸಲಾಗಿದೆ. ಇದಾದ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಪ್ಯಾಂಟ್ನಲ್ಲಿ ದಕ್ಷಿಣ ಸುಡಾನ್ ಅಧ್ಯಕ್ಷರ ಮೂತ್ರ ವಿಸರ್ಜನೆ ವಿಡಿಯೋ ವೈರಲ್: ಆರು ಪತ್ರಕರ್ತರ ಬಂಧನ
ಏರ್ ಇಂಡಿಯಾ ವಿಮಾನದಲ್ಲಿ ನಡೆದ ದುರ್ವರ್ತನೆ:ಇದಕ್ಕೂ ಮೊದಲು, ಕಳೆದ ವರ್ಷ ನವೆಂಬರ್ 26 ರಂದು ನ್ಯೂಯಾರ್ಕ್ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದ ಬಿಸಿನೆಸ್ ಕ್ಲಾಸ್ನಲ್ಲಿ ಸಹ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜಿಸಿದ್ದ ಶಂಕರ್ ಮಿಶ್ರಾ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಈತನ ದುರ್ನಡತೆಯಿಂದಾಗಿ ನೊಂದ ಮಹಿಳೆ ಏರ್ ಇಂಡಿಯಾದ ಆಡಳಿತ ಮಂಡಳಿಗೆ ದೂರು ನೀಡಿದ್ದರು. ಇದರಿಂದ ಎಚ್ಚೆತ್ತುಕೊಂಡ ಏರ್ ಇಂಡಿಯಾ ಆಡಳಿತ ಮಂಡಳಿ ದೆಹಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು. ಆರೋಪಿಯ ಮೊಬೈಲ್ ಲೋಕೇಶನ್ ಟ್ರೇಸ್ ಮಾಡಿ ತನಿಖೆ ನಡೆಸಿ ಬೆಂಗಳೂರಿನ ಸಂಜಯನಗರದಲ್ಲಿ ಪೊಲೀಸರು ಬಂಧಿಸಿದ್ದರು.
ಹೊದಿಕೆ ಮೇಲೆ ಮೂತ್ರ ವಿಸರ್ಜಿಸಿದ ಭೂಪ:ಕಳೆದನವೆಂಬರ್‌ನಲ್ಲಿ ನಡೆದ ಪ್ರಕರಣದಂತೆಯೇ ಕಳೆದ ಡಿಸೆಂಬರ್ನಲ್ಲಿಯೂ ದುರ್ವರ್ತನೆ ಪ್ರಕರಣ ನಡೆದಿತ್ತು. ಪ್ರಯಾಣಿಕನೋರ್ವ ಕುಡಿದ ನಶೆಯಲ್ಲಿ ವಿಮಾನದಲ್ಲಿ ಮಹಿಳೆಯ ಹೊದಿಕೆ ಮೇಲೆ ಮೂತ್ರ ವಿಸರ್ಜಿಸಿದ್ದ. ಈ ವಿಲಕ್ಷಣ ಘಟನೆ ಪ್ಯಾರಿಸ್ ಮತ್ತು ದೆಹಲಿ ನಡುವಿನ ಏರ್ ಇಂಡಿಯಾ ವಿಮಾನ -142ರಲ್ಲಿ ಡಿಸೆಂಬರ್ 6 ರಂದು ನಡೆದಿತ್ತು. ನಂತರ ಆರೋಪಿ ಮಹಿಳೆಯ ಬಳಿ ಲಿಖಿತವಾಗಿ ಕ್ಷಮೆಯಾಚಿಸಿದ್ದಾನೆ. ನಂತರ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ಬಂಧಿಸಿದ್ದರು. ಆದರೆ ಇಬ್ಬರು ಪ್ರಯಾಣಿಕರು ಪರಸ್ಪರ ರಾಜಿ ಮಾಡಿಕೊಂಡಿದ್ದರಿಂದ ಆತನನ್ನು ಬಿಡುಗಡೆ ಮಾಡಲು ಅನುಮತಿಸಲಾಗಿತ್ತು.
ಇದನ್ನೂ ಓದಿ:ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಕೇಸ್: 4 ಗ್ಲಾಸ್ ವಿಸ್ಕಿ ಕುಡಿದು ತೇಲಾಡುತ್ತಿದ್ದ ಆರೋಪಿ!