ಬದೌನ್(ಉತ್ತರ ಪ್ರದೇಶ): ಸ್ನೇಹಿತನಿಂದಲೇ ತನ್ನ ಪತ್ನಿಯ ಮೇಲೆ ಅತ್ಯಾಚಾರ ಮಾಡಿಸಿರುವ ವ್ಯಕ್ತಿಯೊಬ್ಬ ಪೊಲೀಸರ ಅತಿಥಿಯಾಗಿರುವ ಘಟನೆ ಉತ್ತರ ಪ್ರದೇಶದ ಬದೌನ್ನಲ್ಲಿ ನಡೆದಿದೆ. ಸ್ನೇಹಿತನನ್ನ ಬಂಧನಕ್ಕೊಳಪಡಿಸಬೇಕೆಂಬ ಕಾರಣಕ್ಕಾಗಿ ಈ ರೀತಿ ನಡೆದುಕೊಂಡಿರುವುದಾಗಿ ಪೊಲೀಸ್ ವಿಚಾರಣೆ ವೇಳೆ ತಿಳಿದು ಬಂದಿದೆ. ಬದೌನ್ ಜಿಲ್ಲೆಯ ಹಸಸ್ವಾನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿರುವುದಾಗಿ ಬೆಳಕಿಗೆ ಬಂದಿದೆ.
ತನ್ನ ಹೆಂಡತಿ ಮೇಲೆ ಸ್ನೇಹಿತನಿಂದ ಅತ್ಯಾಚಾರ ನಡೆದಿರುವ ವಿಷಯವನ್ನ ವ್ಯಕ್ತಿ ಖುದ್ದಾಗಿ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ತಿಳಿಸಿದ್ದಾನೆ. ಈ ಪ್ರಕರಣದಲ್ಲಿ ಗಂಡ - ಹೆಂಡತಿಯನ್ನ ವಿಚಾರಣೆಗೊಳಪಡಿಸಿದಾಗ ಸತ್ಯಾಂಶ ಹೊರಬಿದ್ದಿದೆ.
ಏನಿದು ಪ್ರಕರಣ?:ಕಳೆದ ಮಾರ್ಚ್ 1ರಂದು ವ್ಯಕ್ತಿಯೊಬ್ಬ ತನ್ನ ಪತ್ನಿಯ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದನು. ಸ್ಥಳಕ್ಕಾಗಮಿಸಿದ ಪೊಲೀಸರು ಪತಿ - ಪತ್ನಿಯನ್ನ ಠಾಣೆಗೆ ಕರೆದು, ಪ್ರತ್ಯೇಕವಾಗಿ ವಿಚಾರಣೆಗೊಳಪಡಿಸಿದ್ದರು. ಈ ವೇಳೆ ಸ್ನೇಹಿತ ಅತ್ಯಾಚಾರವೆಸಗಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ವ್ಯಕ್ತಿ ಹೇಳಿಕೊಂಡಿದ್ದನು. ಆದರೆ, ಪತ್ನಿಯನ್ನ ವಿಚಾರಣೆಗೊಳಪಡಿಸಿದಾಗ ನಡೆದಿರುವ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ.