ಕೋಲ್ಕತ್ತಾ (ಪಶ್ಚಿಮ ಬಂಗಾಳ): ನಮ್ಮ ಮುಖ್ಯ ಕಾರ್ಯದರ್ಶಿಯನ್ನು ಕಳುಹಿಸಲು ಸಾಧ್ಯವಿಲ್ಲ, ನಿಮ್ಮ ಆದೇಶವನ್ನು ರದ್ದು ಮಾಡಿ ಎಂದು ಕೋರಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಪಶ್ಚಿಮ ಬಂಗಾಳ ರಾಜ್ಯದ ಮುಖ್ಯ ಕಾರ್ಯದರ್ಶಿ ಅಲಪನ್ ಬಂಡೋಪಾಧ್ಯಾಯರ ಸೇವಾ ಅವಧಿ ಮುಕ್ತಾಯಗೊಂಡಿದ್ದು, ಮೇ 24 ರಂದು ಇವರ ಅವಧಿಯನ್ನು 3 ತಿಂಗಳ ಕಾಲ ವಿಸ್ತರಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಆದರೆ 4 ದಿನಗಳ ಬಳಿಕ ಮೋದಿ ಸರ್ಕಾರವು ಮತ್ತೆ ಯೂಟರ್ನ್ ಹೊಡೆದು ಅಲಪನ್ ಬಂಡೋಪಾಧ್ಯಾಯರನ್ನು ಕಳುಹಿಸುವಂತೆ ದೀದಿ ಸರ್ಕಾರಕ್ಕೆ ಸೂಚಿಸಿತ್ತು.
ಇದನ್ನೂ ಓದಿ: Yaas ಸಭೆ: ಪ್ರಧಾನಿ ಮೋದಿಯನ್ನೇ ಕಾಯಿಸಿದ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ..!
ಇದೀಗ ಪಿಎಂ ಮೋದಿಗೆ ಪತ್ರ ಬರೆದಿರುವ ಸಿಎಂ ಮಮತಾ, "ಕೊರೊನಾ ಸಾಂಕ್ರಾಮಿಕದ ಇಂತಹ ಸಂಕಷ್ಟದ ಸಮಯದಲ್ಲಿ ನಮ್ಮ ಮುಖ್ಯ ಕಾರ್ಯದರ್ಶಿಯನ್ನ ಕಳುಹಿಸಲು ಸಾಧ್ಯವಿಲ್ಲ, ನಾನು ಕಳುಹಿಸುತ್ತಲೂ ಇಲ್ಲ. ನಿಮ್ಮ ಈ ಆದೇಶವನ್ನೇ ರದ್ದುಗೊಳಿಸಿ. ನಿಮ್ಮ ಏಕಪಕ್ಷೀಯ ಆದೇಶವನ್ನು ನೋಡಿ ನಾನು ಆಘಾತಕ್ಕೊಳಗಾಗಿದ್ದೇನೆ ಮತ್ತು ದಿಗ್ಭ್ರಮೆಗೊಂಡಿದ್ದೇನೆ. ಮೇ 24 ರಂದು ನೀವು ನೀಡಿದ್ದ ಆದೇಶಕ್ಕೆ ಏನಾಯಿತು ಎಂದು ಅರ್ಥವಾಗುತ್ತಿಲ್ಲ. ನಿಮ್ಮ ಆದೇಶವು ಕಲೈಕುಂಡದಲ್ಲಿ ನಿಮ್ಮೊಂದಿಗಿನ ನನ್ನ ಭೇಟಿಗೆ ಸಂಬಂಧಿಸಿಲ್ಲ ಎಂದು ನಾನು ಭಾವಿಸುತ್ತೇನೆ." ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಯಾಸ್ ಚಂಡಮಾರುತದಿಂದ ರಾಜ್ಯದಲ್ಲಿ ಸಂಭವಿಸಿರುವ ಹಾನಿ ಪರಿಶೀಲಿಸಲು ಪ್ರಧಾನಿ ಮೋದಿ ಕಲೈಕುಂಡದಲ್ಲಿ ಸಭೆ ನಡೆಸಿದ್ದರು. ಈ ಸಭೆಗೆ ಅರ್ಧ ಗಂಟೆ ತಡವಾಗಿ ಬಂದ ಸಿಎಂ ಮಮತಾ ಬಿಜೆಪಿಯ ಟೀಕೆಗಳಿಗೆ ಗುರಿಯಾಗಿದ್ದರು.